
Temple open from today- ಭಾನುವಾರದಿಂದ ಪ್ರಾರ್ಥನಾ ಮಂದಿರಗಳ ಆರಂಭ, ಪೂಜೆ, ಪ್ರಸಾದಕ್ಕೆ ವಿಘ್ನ ನಿವಾರಣೆ!
Saturday, July 24, 2021
ರಾಜ್ಯದ ಎಲ್ಲ ದೇವಸ್ಥಾನ, ಮಸೀದಿ ಮತ್ತು ಚರ್ಚುಗಳು ಸೇರಿದಂತೆ ಪ್ರಾರ್ಥನಾ ಮಂದಿರಗಳಲ್ಲಿ ಇಂದಿನಿಂದ (25-07-2021)ರಿಂದ ಪ್ರಾರ್ಥನೆ, ಪೂಜೆ ಮತ್ತು ಪ್ರಸಾದ ವಿತರಣೆ ಸಾಂಗವಾಗಿ ನಡೆಯಲಿದೆ.
ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಠ-ಮಂದಿರ, ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಸಹಿತ ಪ್ರಾರ್ಥನಾ ಮಂದಿರಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಇದೀಗ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಾಜ್ಯದ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಈ ಬಗ್ಗೆ ಮಾಹಿತಿ ನೀಡಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಸೂಕ್ತ ಆದೇಶ ಹೊರಡಿಸಿದ್ದೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸರ್ಕಾರಿ ಕಚೇರಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಸದ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಉತ್ಸವ, ಮೆರವಣಿಗೆ ಮತ್ತು ಸಭೆಗಳಿಗೆ ಅವಕಾಶ ನೀಡಿಲ್ಲ ಎಂದು ರಾಜ್ಯ ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.