Food Processing Training- ಕಿರು ಆಹಾರ ಸಂಸ್ಕರಣೆ ಉದ್ದಿಮೆ: ಆಗಸ್ಟ್ 5 ರಂದು ತರಬೇತಿ ಶಿಬಿರ
ಮಂಗಳೂರು: ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣೆ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯಡಿ ಮಾಹಿತಿ ಹಾಗೂ ತರಬೇತಿ ಶಿಬಿರವನ್ನು ಆಗಸ್ಟ್ 5 ರಂದು ಬೆಳಿಗ್ಗೆ 11 ಗಂಟೆಗೆ ನಗರದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ಕಿರು ಆಹಾರ ಸಂಸ್ಕರಣೆ ಉದ್ದಿಮೆಗಳನ್ನು ಸ್ಥಾಪಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಉದ್ದಿಮೆದಾರರಿಗೆ ತಮ್ಮ ಉದ್ದಿಮೆಯನ್ನು ವಿಸ್ತರಣೆಗೊಳಿಸಲು ಸರ್ಕಾರದ ಸಹಾಯಧನದಡಿ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
ಜಿಲ್ಲೆಯಲ್ಲಿ ತೋಟಗಾರಿಕೆ ಉತ್ಪನ್ನಗಳನ್ನು ಬಳಸಿಕೊಂಡು ಉದ್ದಿಮೆಯನ್ನು ನಿರ್ವಹಿಸುತ್ತಿರುವ ಗೇರು ಸಂಸ್ಕರಣೆ, ತೆಂಗು ಎಣ್ಣೆಯ ಮಿಲ್‍ಗಳು, ಉಪ್ಪಿನಕಾಯಿ ತಯಾರಿ ಘಟಕ, ಜ್ಯೂಸ್ ತಯಾರಿ ಘಟಕ, ಸಾಂಬಾರು ಹುಡಿ ತಯಾರಿ ಘಟಕ, ಹಲಸಿನ ಹಪ್ಪಳ, ಬಾಳೆಕಾಯಿ ಚಿಪ್ಸ್ ಹಾಗೂ ಇತರೆ ಉತ್ಪನ್ನ ತಯಾರಿ ಘಟಕ ಇತ್ಯಾದಿ ಘಟಕಗಳಿಗೆ ಈ ಯೋಜನೆಯಲ್ಲಿರುವ ವಿಫುಲ ಅವಕಾಶಗಳ ಕುರಿತು ಮಾಹಿತಿ ಶಿಬಿರ ಹಾಗೂ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಯೋಜನೆಯಡಿ ಉದ್ದಿಮೆದಾರರಿಗೆ ಅಗತ್ಯ ಸಂಪನ್ಮೂಲ ಮಾಹಿತಿ ಹಾಗೂ ಯೋಜನಾ ವರದಿ ತಯಾರಿಗೆ ನೆರವು ನೀಡಲಾಗುವುದು. ಹೆಚ್ಚಿನ ಮಾಹಿತಿ ಹಾಗೂ ತರಬೇತಿ ಶಿಬಿರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಉದ್ದಿಮೆದಾರರು ಭಾಗವಹಿಸಲು ಉಪನಿರ್ದೇಶಕರ ಕಛೇರಿಯನ್ನು ಸಂಪರ್ಕಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.