2-8-2021 Corona Update- ಗಡಿಯಲ್ಲಿ ಕಟ್ಟುನಿಟ್ಟಿನ ಭದ್ರತೆ: ದ.ಕ. ಸಹಿತ ಎಲ್ಲೆಡೆ ಮತ್ತೆ ಇಳಿಕೆ ಕಂಡ ಕೊರೋನಾ
ಕರ್ನಾಟಕ ಮತ್ತು ಕೇರಳ ಗಡಿ ಪ್ರದೇಶದಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಕೊರೋನಾ ಸೋಂಕಿನ ಅಬ್ಬರ ಸೋಮವಾರ ಭಾರೀ ಇಳಿಕೆ ಕಂಡಿದೆ.
ಭಾನುವಾರ 410 ಹೊಸ ಸೋಂಕು ದಾಖಲಿಸಿದ್ದ ಜಿಲ್ಲೆಯಲ್ಲಿ ಸೋಮವಾರ ಬಹುತೇಕ ಅರ್ಧದಷ್ಟು ಅಂದರೆ 219 ಪ್ರಕರಣ ದಾಖಲಾಗಿದೆ.
ಈ ಮೂಲಕ ಬೆಂಗಳೂರು ನಗರ (290)ದ ಬಳಿಕ ರಾಜ್ಯದಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಂಡ ಜಿಲ್ಲೆ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಉಡುಪಿ ಜಿಲ್ಲೆಯಲ್ಲಿ 135 ಹೊಸ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿದ್ದು, ಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದೆ. ಮೈಸೂರು 102 ಸೋಂಕಿತರ ಸಂಖ್ಯೆಯೊಂದಿಗೆ ಆ ನಂತರದ ಸ್ಥಾನದಲ್ಲಿದೆ.
ದಕ್ಷಿಣ ಕನ್ನಡದ ನೆರೆ ಹೊರೆಯ ಜಿಲ್ಲೆಗಳಾಧ ಚಿಕ್ಕಮಗಳೂರು(36), ಹಾಸನ (91), ಉತ್ತರ ಕನ್ನಡ (41) ಕೊಡಗು (81) , ಶಿವಮೊಗ್ಗ (34)ದಲ್ಲೂ ಕೋವಿಡ್ ಸೋಂಕಿನಲ್ಲಿ ಇಳಿಮುಖ ದಾಖಲಿಸಿದೆ.
ರಾಜ್ಯದಲ್ಲಿ ಒಟ್ಟು 1285 ಹೊಸ ಪ್ರಕರಣಗಳು ದಾಖಲಾಗಿದ್ದು, ಒಂದೇ ದಿನ 25 ಮಂದಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರು ನಗರದಲ್ಲಿ ಐದು, ದಕ್ಷಿಣ ಕನ್ನಡ ಮತ್ತು ಮೈಸೂರಿನಲ್ಲಿ ತಲಾ ನಾಲ್ಕು ಮಂದಿ ಬಲಿಯಾಗಿದ್ದಾರೆ.