Dist Judge Selected- ದ.ಕನ್ನಡದ ಇಬ್ಬರು ಜಿಲ್ಲಾ ನ್ಯಾಯಾಧೀಶರಾಗಿ ನೇಮಕ: ಮಮ್ತಾಜ್, ಜ್ಯೋತ್ಸ್ನಾಗೆ ವಕೀಲರ ಶುಭಹಾರೈಕೆ
ಮಂಗಳೂರು: ಇತ್ತೀಚೆಗೆ ನಡೆದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡದ ಇಬ್ಬರು ಆಯ್ಕೆಯಾಗಿದ್ದಾರೆ.
ಕಿನ್ನಿಗೋಳಿಯ ಮಮ್ತಾಜ್ ಮತ್ತು ಪುತ್ತೂರು ದೋಳದ ಜ್ಯೋತ್ಸ್ನಾ ಶಾಸ್ತ್ರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ನ್ಯಾಯಪೀಠಕ್ಕೆ ಆಯ್ಕೆಯಾಗಿದ್ದಾರೆ.
ಪುತ್ತೂರು ವಕೀಲರ ಸಂಘದ ಸದಸ್ಯೆಯಾಗಿರುವ ಜ್ಯೋತ್ಸ್ನಾ ಶಾಸ್ತ್ರಿ, ಹಿರಿಯ ನ್ಯಾಯವಾದಿ ಬೆಟ್ಟ ಈಶ್ವರ ಭಟ್ ಅವರ ಕಿರಿಯ ಸಹೋದ್ಯೋಗಿ.
ಸುಳ್ಯ ಮರ್ಕಂಜ ದೋಳ ನಿವಾಸಿ ಶಂಕರನಾರಾಯಣ ಶಾಸ್ತ್ರಿ ಮತ್ತು ವಿಜಯಲಕ್ಷ್ಮೀ ಶಾಸ್ತ್ರೀ ದಂಪತಿ ಪುತ್ರಿಯಾಗಿರುವ ಜ್ಯೋತ್ಸ್ನಾ ಕ್ರಿಯಾಶೀಲ ವ್ಯಕ್ತಿತ್ವ ಉಳ್ಳವರು.
ಕಾನೂನು ಪದವಿ ಪೂರ್ಣಗೊಳಿಸಿದ ಬಳಿಕ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಹಲವು ಸಮಯ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೇ ಸಂದರ್ಭದಲ್ಲಿ ಅವರು ಪುತ್ತೂರಿನಲ್ಲಿ ನ್ಯಾಯವಾದಿ ಬೆಟ್ಟ ಈಶ್ವರ ಭಟ್ ಅವರ ಕಚೇರಿಯಲ್ಲಿ ಕಿರಿಯ ಸಹೋದ್ಯೋಗಿಯಾಗಿ ಸೇವೆ ಸಲ್ಲಿಸಿದ್ದರು.
ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಕೋರ್ಟು ಕಚೇರಿ ಕೆಲಸದ ನಿರ್ಬಂಧ ಹಿನ್ನೆಲೆಯಲ್ಲಿ ಮರ್ಕಂಜದ ತಮ್ಮ ಮನೆಯಲ್ಲೇ ಇದ್ದು ಪರೀಕ್ಷೆಗೆ ತಯಾರಿ ನಡೆಸಿದರು.
ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಪಾಸ್ ಆಗಿರುವ ಜ್ಯೋತ್ಸ್ನಾ ಅವರು, ಹೈಕೋರ್ಟ್‌ನಲ್ಲಿ ಮೇ 20ರಂದು ನಡೆದ ನ್ಯಾಯಾಧೀಶ ಹುದ್ದೆಗೆ ನಡೆದ ಆಯ್ಕೆ ಸಂದರ್ಶನದಲ್ಲಿ ಶಾರ್ಟ್ ಲಿಸ್ಟ್ ಆಗಿದ್ದ 12 ಮಂದಿ ಆಯ್ಕೆಯಾಗಿದ್ದವರ ಪೈಕಿ ಜ್ಯೋತ್ಸ್ನಾ ಅವರು 2ನೇ Rankನಲ್ಲಿ ಗೆದ್ದು ಬಂದಿದ್ದಾರೆ.
ಇನ್ನು ಮಮ್ತಾಜ್ ಮಂಗಳೂರು ವಕೀಲರ ಸಂಘದ ಸದಸ್ಯೆಯಾಗಿದ್ದು, ಹಿರಿಯ ವಕೀಲ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜ ಅವರ ಬಳಿ ಕಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ಬಳಿಕ ಸರ್ಕಾರಿ ಅಭಿಯೋಜಕರಾಗಿ ಭಟ್ಕಳದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಇದೀಗ ಮಮ್ತಾಜ್ ಆಯ್ಕೆಯಾಗಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಇಬ್ಬರು ಸಾಧಕಿಯರಿಗೆ ಜಿಲ್ಲೆಯ ವಕೀಲರು ಶುಭ ಹಾರೈಸಿದ್ದಾರೆ.