D M Kulal Expired- ಪತ್ರಕರ್ತ, ಸಂಘಟಕ, ತುಳು ಹೋರಾಟಗಾರ ಡಿ.ಎಂ ಕುಲಾಲ್ ನಿಧನ, ಗಣ್ಯರ ಸಂತಾಪ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ, ಹಿರಿಯ ಪತ್ರಕರ್ತ, ಸಂಘಟಕ, ಸಾಮಾಜಿಕ ಕಾರ್ಯಕರ್ತ ಡಿ.ಎಂ.ಕುಲಾಲ್ (ದೈಪಲ ಮಾಧವ ಕುಲಾಲ್-54.) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ತಮ್ಮ ನಿವಾಸದಲ್ಲಿ ನಿಧನರಾದರು.
ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಬಂಟ್ವಾಳ ತಾಲೂಕು ಕುಲಾಲ ಸಮಾಜ ಸುಧಾರಕ ಸಂಘದಲ್ಲಿ ಸಕ್ರಿಯ ಸದಸ್ಯರೂ, ಪದಾಧಿಕಾರಿಯೂ ಆಗಿ ಸೇವೆ ಸಲ್ಲಿಸಿದ್ದರು.
ಮಾಣಿಲ ಶ್ರೀಧಾಮದ ಸೇವಾ ಸಮಿತಿಯಲ್ಲಿ ಸಕ್ರಿಯರಾಗಿದ್ದ ಡಿಎಂಕೆ ಕುಲಾಲ್ ಅವರು, ಮಠ ಕುಂಭೋಧರಿ ದೇವಿ ಟ್ರಸ್ಟ್ ನ ಸ್ಥಾಪಕರು ಆಗಿದ್ದರು. ಮುಂಗಾರು, ಮಂಗಳೂರು ಮಿತ್ರ, ನೇತ್ರಾವತಿ ವಾರ್ತೆ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದು, ಪತ್ರಿಕೋದ್ಯಮಕ್ಕೆ ವಿದಾಯ ಹೇಳಿದ ತರುವಾಯ ವಿವಿಧ ಪತ್ರಿಕೆಗಳಿಗೆ ಲೇಖನವನ್ನು ಬರೆಯುತ್ತಿದ್ದರು.
ತನ್ನ ಸಂಬಂಧಿಕರೂ ಆಗಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಡಾ| ಅಮ್ಮೆಂಬಳ ಬಾಳಪ್ಪ ಅವರ ಜೀವನ ಚರಿತ್ರೆಯ ಪುಸ್ತಕ ಸೇರಿದಂತೆ ಒಟ್ಟು ನಾಲ್ಕು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಯೋಗವು ಇತ್ತೀಚೆಗೆ ಕುಲಾಲ್ ಅವರ ನಿವಾಸಕ್ಕೆ ತೆರಳಿ 'ತುಳು ಚಾವಡಿ ಪುರಸ್ಕಾರ' ನೀಡಿ ಗೌರವಿಸಿತ್ತು.
ಮೃತರ ನಿಧನಕ್ಕೆ ಬಂಟ್ವಾಳದ ಶಾಸಕ ಉಳಿಪಾಡಿ ರಾಜೇಶ್ ನಾಯ್ಕ್ , ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ತುಳು ಕೂಟ ಅಧ್ಯಕ್ಷ ಸುದರ್ಶನ್ ಜೈನ್, ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ತುಳು ಸಂಘ ಬರೋಡ ಅಧ್ಯಕ್ಷ ಗುರುವಾಯನಕೆರೆ ಶಶಿಧರ ಬಿ. ಶೆಟ್ಟಿ, ಗುಜರಾತ್, ಫರಂಗಿ ಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಕೆ. ಕೆ. ಪೂಂಜ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಬಂಟ್ವಾಳ ತಾಲೂಕು ಕುಲಾಲ ಸಮಾಜ ಸುಧಾರಕ ಸಂಘ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ, ಪದಾಧಿಕಾರಿಗಳು ಹಾಗೂ ಸದಸ್ಯರ ಸಹಿತ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.