Eshwarappa on cabinet formation- ಹೊಸಬರಿಗೆ ಸಚಿವ ಸ್ಥಾನ ಸಾಧ್ಯತೆ: ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಸುಳಿವು
ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ಅಧಿಕಾರದ ಸ್ಥಾನವೇ ಬೇಕು ಎಂದೇನಿಲ್ಲ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ಮೂಲಕ ತಮಗೆ ಸೇರಿದಂತೆ ಪಕ್ಷಾಂತರಿಗಳಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕೈತಪ್ಪಬಹುದು ಎಂಬ ಸಂದೇಶವನ್ನು ಸಾರಿದ್ದಾರೆ.
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಸಂಪುಟ ರಚನೆಗೆ ಕಸರತ್ತು ಆರಂಭವಾಗಿದೆ. ಬಹುತೇಕ ಸಚಿವರ ಪಟ್ಟಿ ಸಿದ್ಧವಾಗಿದ್ದು, ವರಿಷ್ಟರ ಹಸಿರುನಿಶಾನೆಗೆ ಸಿಎಂ ಕಾಯುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಚಿವ ಸಂಪುಟ ವಿಸ್ತರಣೆ ಭಗವಂತ ಮತ್ತು ಹೈಕಮಾಂಡ್‌ಗೆ ಬಿಟ್ಟದ್ದು. ವಿಭಿನ್ನ ತಂತ್ರಗಾರಿಕೆಯನ್ನು ಹೈಕಮಾಂಡ್ ಅನುಸರಿಸಬಹುದು. ಆದರೆ, ಯಾರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುತ್ತದೆ ಎಂಬುದು ತಿಳಿದಿಲ್ಲ ಎಂದು ಹೇಳಿದರು.
ಹೈಕಮಾಂಡ್ ಯಾವುದೇ ಲಾಬಿಗೆ ಅಥವಾ ಒತ್ತಡಕ್ಕೆ ಮಣಿಯುತ್ತದೆ ಎಂದು ನನಗೆ ಅನ್ನಿಸುತ್ತಿಲ್ಲ. ಆದುದರಿಂದ ಆಪರೇಷನ್ ಕಮಲ ಮೂಲಕ ಇತ್ತೀಚೆಗೆ ಪಕ್ಷಕ್ಕೆ ಆಗಮಿಸಿದ ಶಾಸಕರಲ್ಲಿ ಕೆಲವರಿಗೆ ಅವಕಾಶ ಕೈತಪ್ಪಬಹುದು ಎಂದು ಅವರು ಸುಳಿವು ನೀಡಿದರು.
ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ಭವಿಷ್ಯ ಕೇವಲ ಆರು ತಿಂಗಳು ಮಾತ್ರ ಎಂಬ ಸ್ವಾಮೀಜಿಯೊಬ್ಬರ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಸ್ವಾಮೀಜಿಯವರ ಭವಿಷ್ಯದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಅದು ಸತ್ಯವೂ ಆಗಬಹುದು, ಸುಳ್ಳೂ ಆಗಬಹುದು ಎಂದು ಮಾರ್ಮಿಕವಾಗಿ ನುಡಿದರು.