Fishermen oppose Sagar Mala- ದೋಣಿ ತೆರವಿಗೆ ಬಲಪ್ರಯೋಗದ ಬೆದರಿಕೆ : ಮೀನುಗಾರರ ಸಂಘದ ವಿರೋಧ
ತಲೆಮಾರುಗಳಿಂದ ಸಾಂಪ್ರದಾಯಿಕ ಮೀನುಗಾರರು ಬೆಂಗರೆ ಪ್ರದೇಶದ ಪಲ್ಗುಣಿ ನದಿ ದಂಡೆಯಲ್ಲಿ ದೋಣಿ ಕಟ್ಟಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಇದೀಗ ಸಾಗರ ಮಾಲಾ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಕೋಸ್ಟಲ್ ಬರ್ತ್ ಕಾಮಗಾರಿಗಾಗಿ ಪರ್ಯಾಯ ಸ್ಥಳ, ಅಧಿಕೃತ ಮಾತುಕತೆಗಳಿಲ್ಲದೆ ನಾಡದೋಣಿಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಸಾಂಪ್ರದಾಯಿಕ ಮೀನುಗಾರರನ್ನು ಬಲವಂತ ಪಡಿಸುತ್ತಿದೆ. ಒಪ್ಪದಿದ್ದರೆ ಬಲಪ್ರಯೋಗ ಮಾಡುತ್ತಿದೆ. ಜಿಲ್ಲಾಡಳಿತ ಈ ಸರ್ವಾಧಿಕಾರಿ ಧೋರಣೆಯನ್ನು "ಪಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘ" ತೀವ್ರವಾಗಿ ಖಂಡಿಸಿದೆ. ಜಿಲ್ಲಾಡಳಿತ ಸಭೆ ನಡೆಸದೆ ದೋಣಿ ತೆರವು ಮಾಡಲ್ಲ ಎಂದು ಅದು ಹೇಳಿದೆ.
ಮಂಗಳೂರಿನ ಕಸ್ಬಾ ಬೆಂಗರೆ ನದಿ ದಂಡೆಯಲ್ಲಿ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಸಾಗರ ಮಾಲಾ ಯೋಜನೆಯಡಿ ಸರಕಾರ ಕೋಸ್ಟಲ್ ಬರ್ತ್ ನಿರ್ಮಿಸುತ್ತಿದೆ. ಮೀನುಗಾರರೇ ಹೆಚ್ಚಿರುವ ಕಸ್ಬಾ ಬೆಂಗರೆ ಗ್ರಾಮಸ್ಥರು ಈ ಯೋಜನೆಯ ನಿರ್ಮಾಣವನ್ನು ಒಕ್ಕೊರಲಿನಿಂದ ವಿರೋಧಿಸಿದ್ದರು. ಆದರೆ ಪೊಲೀಸ್ ಬಲದೊಂದಿಗೆ ಜಿಲ್ಲಾಡಳಿತ ಗ್ರಾಮಸ್ಥರ ವಿರೋಧವನ್ನು ಕಡೆಗಣಿಸಿ ಕೋಸ್ಟಲ್ ಬರ್ತ್ ಕಾಮಗಾರಿ ತೀವ್ರಗೊಳಿಸಿದೆ. ಕಾಮಗಾರಿ ಇದೀಗ ಸಾಂಪ್ರದಾಯಿಕ ಮೀನುಗಾರರು ದೋಣಿ ಕಟ್ಟಿ ಹಾಕುವ ಪ್ರದೇಶಕ್ಕೆ ವಿಸ್ತರಣೆಗೊಂಡಿದೆ. ಈ ಸ್ಥಳದಲ್ಲಿ ನೂರಕ್ಕೂ ಹೆಚ್ಚು ಸಾಂಪ್ರದಾಯಿಕ ದೋಣಿಗಳು ತಂಗುತ್ತಿದ್ದು, ಮೀನುಗಾರಿಕಾ ಇಲಾಖೆ, ಜಿಲ್ಲಾಡಳಿತ ಯಾವುದೇ ಸೂಕ್ತ ಪರ್ಯಾಯ ವ್ಯವಸ್ಥೆ ಇಲ್ಲದೆ ಸಾಂಪ್ರದಾಯಿಕ ನಾಡದೋಣಿಗಳನ್ನು ತೆರವುಗೊಳಿಸುವುದರಿಂದ ತಮ್ಮ ಉದ್ಯೋಗವೇ ಕಳೆದು ಹೋಗುತ್ತದೆ ಎಂದು ಮೀನುಗಾರರು ಆಕ್ಷೇಪ ವ್ಯಕ್ತಪಡಿಸಿ ದೋಣಿಗಳನ್ನು ತೆರವುಗೊಳಿಸಲು ಕಳೆದೆರಡು ತಿಂಗಳಿನಿಂದ ನಿರಾಕರಿಸುತ್ತಿದ್ದಾರೆ.
ಸಾಂಪ್ರದಾಯಿಕ ದೋಣಿಗಳು ತಂಗಲು ಸೂಕ್ತ ವ್ಯವಸ್ಥೆ, ಸಾಗರ ಮಾಲಾದಿಂದ ಮನೆ ಕಳೆದುಕೊಳ್ಳುವ ಮೀನುಗಾರರಿಗೆ ನ್ಯಾಯಯುತ ಪುನರ್ವಸತಿ, ಈ ಬಗ್ಗೆ ಭರವಸೆಯ ಬದಲಿಗೆ ಜಿಲ್ಲಾಡಳಿತ ಅಧಿಕೃತ ಸಭೆಯಲ್ಲಿ ತೀರ್ಮಾನ ಎಂಬ ಬೇಡಿಕೆಯನ್ನು ಪಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘ ಜಿಲ್ಲಾಡಳಿತದ ಮುಂದಿಟ್ಟಿದೆ. ಅಲ್ಲಿವರಗೆ ದೋಣಿಗಳನ್ನು ತೆರವುಗೊಳಿಸದಿರಲು ನಿರ್ಧರಿಸಲಾಗಿತ್ತು. ಈ ಕುರಿತು ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಅನೌಪಚಾರಿಕ ಮಾತುಕತೆ ನಡೆಸಿ ಭರವಸೆ ನೀಡಲಾಗಿತ್ತು.
ಅದರಂತೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಾಂಪ್ರದಾಯಿಕ ಮೀನುಗಾರರ ಮುಖಂಡರನ್ನು ಕರೆದು ಸಮಸ್ಯೆಗಳನ್ನು ಆಲಿಸಿದ್ದು, ವಾರದೊಳಗೆ ಜಿಲ್ಲಾಡಳಿತದಿಂದ ಅಧಿಕೃತ ಸಭೆ ನಡೆಸುವುದಾಗಿ ಹೇಳಿದ್ದರು. ಇದೀಗ ಮೀನುಗಾರಿಕೆ ಹಾಗೂ ಬಂದರು ಅಧಿಕಾರಿಗಳು ಏಕಾಏಕಿ ಯಾವುದೇ ಸಭೆ, ಮಾತುಕತೆ ಇಲ್ಲದೆ ದೋಣಿಗಳನ್ನು ತೆಗೆಯಲು ಮೀನುಗಾರರನ್ನು ಬಲವಂತ ಪಡಿಸುತ್ತಿದ್ದಾರೆ. ಒಪ್ಪದಿದ್ದಲ್ಲಿ ಬಲಪ್ರಯೋಗಿಸುವ ಬೆದರಿಕೆ ಒಡ್ಡುತ್ತಿದ್ದಾರೆ.
ಜಿಲ್ಲಾಡಳಿತದ ಈ ಸರ್ವಾಧಿಕಾರಿ, ನ್ಯಾಯಸಮ್ಮತವಲ್ಲದ ಧೋರಣೆಯನ್ನು ಪಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘ ತೀವ್ರವಾಗಿ ವಿರೋಧಿಸಿದೆ. ಜಿಲ್ಲಾಡಳಿತದ ಅಧಿಕೃತ ಸಭೆ, ಸಮಸ್ಯೆಗಳ ನ್ಯಾಯಯುತ ಪರಿಹಾರ ಇಲ್ಲದೆ ದೋಣಿ ತೆರವಿಗೆ ಅವಕಾಶ ನೀಡುವುದಿಲ್ಲ. ಬಲಪ್ರಯೋಗಕ್ಕೆ ಮುಂದಾದರೆ ಮೀನುಗಾರರು ಒಗ್ಗಟ್ಟಾಗಿ ಶಾಂತಿಯುತ ವಿಧಾನದಿಂದ ಎದುರಿಸುವುದಾಗಿ ಸಂಘದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ, ಅಧ್ಯಕ್ಷ ತಯ್ಯೂಬ್ ಬೆಂಗರೆ ತಿಳಿಸಿದ್ದಾರೆ.