Lockdown fear in D.K.- ದ.ಕ.: ಆತಂಕ ಸೃಷ್ಟಿಸಿದ ಪಾಸಿಟಿವಿಟಿ ದರ, ಕೊರೋನಾ ಸೋಂಕು; ಮತ್ತೆ ಲಾಕ್‌ಡೌನ್ ಭೀತಿ
ಈಗಾಗಲೇ ಹೈರಾಣಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಈಗ ಮತ್ತೆ ಆತಂಕ ಶುರುವಾಗಿದೆ. ಪಾಸಿಟಿವಿಟಿ ದರ ಮತ್ತು ಹೊಸ ಕೊರೋನಾ ಸೋಂಕಿನ ಸಂಖ್ಯೆಯಲ್ಲಿ ಏರಿಕೆಯಾದರೆ ಮುಂದಿನ ಸೋಮವಾರದಿಂದ ಮತ್ತೆ ಲಾಕ್‌ಡೌನ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಂಗಳವಾರ 378 ಹೊಸ ಸೋಂಕು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ. 4.28ರಷ್ಟಾಗಿದೆ. ಇದೇ ವೇಳೆ, 359 ಮಂದಿ ಸೋಂಕಿನಿಂದ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಈಗ ಸದ್ಯ 3332 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.
ಹೆಚ್ಚುತ್ತಿರುವ ಸೋಂಕಿನ ಸಂಖ್ಯೆಯ ಜೊತೆ ಸಾವಿನ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ಆಗಸ್ಟ್ 10ರಂದು ಒಂದೇ ದಿನ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ದ.ಕ. ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 1477ಕ್ಕೇರಿದೆ.
ಲಸಿಕೆ ಇನ್ನೂ ಲಭ್ಯವಿಲ್ಲ...
ಹೆಚ್ಚುತ್ತಿರುವ ಸೋಂಕು ನಿಯಂತ್ರಿಸಲು ಅಧಿಕಾರಿಗಳಿಗೂ ಆಗುತ್ತಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದ ಅಧಿಕಾರಿಗಳು, ಜನಪ್ರತಿನಿಧಿಗಳ ಅಸಮರ್ಥತೆಯ ಪರಿಣಾಮವನ್ನು ಜನರು ಎದುರಿಸುವಂತಾಗಿದೆ. ಜನರಿಗೆ ಲಾಕ್‌ಡೌನ್ ಎಂಬ ಭೀತಿಯನ್ನೂ ಹೇರಲಾಗುತ್ತಿದೆ.
ಒಂದು ಕಡೆ ಲಸಿಕೆಯೂ ಲಭ್ಯವಿಲ್ಲದೆ, ಇನ್ನೊಂದು ಕಡೆ ಲಾಕ್‌ಡೌನ್ ಭೀತಿ, ಮತ್ತೊಂದೆಡೆ ಹದಗೆಟ್ಟ ಜನಜೀವನ... ಈ ಎಲ್ಲರ ಮಧ್ಯೆ ಜನರು ಮಾತ್ರ ಕಂಗಾಲಾಗಿದ್ದಾರೆ.
ಮೊದಲ ಡೋಸ್‌ನ ಲಸಿಕೆಯನ್ನು ಜನರಿಗೆ ಒದಗಿಸಲು ಸರ್ಕಾರ ಪರದಾಡುತ್ತಿದೆ. ಆರೋಗ್ಯ ಇಲಾಖೆಯೂ ಕೈಚೆಲ್ಲಿದಂತಿದೆ. ಒಟ್ಟಿನಲ್ಲಿ ಅರಾಜಕತೆ, ಅಭದ್ರತೆ ಮಧ್ಯೆ ಜನರು ಬದುಕುವಂತಾಗಿದೆ.