Mahila Congress - ಬಿಜೆಪಿ ಸರ್ಕಾರದಿಂದ ಕಾಂಗ್ರೆಸ್ ಕಾರ್ಯಕ್ರಮಗಳ ಮರುನಾಮಕರಣ: ಮಹಿಳಾ ಕಾಂಗ್ರೆಸ್ ಆರೋಪ
ಬಿಜೆಪಿ ವಿಭಜಕ ನೀತಿ ಅನುಸರಿಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಮಹಿಳಾ ಕಾಂಗ್ರೆಸ್ ಹೋರಾಟ ರೂಪಿಸಲಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಭವ್ಯಾ ನರಸಿಂಹ ಮೂರ್ತಿ ಹೇಳಿದ್ದಾರೆ.
ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಬಿ. ಸಿ. ರೋಡ್ ನಲ್ಲಿ ನಡೆದ ಮಹಿಳಾ ಕಾರ್ಯಕಾರಿಣಿ ಮತ್ತು ರಕ್ಷಾಬಂಧನ ಕಾರ್ಯಕ್ರಮ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಪ್ರಸ್ತುತ ಪ್ರತಿ ತಿಂಗಳಲ್ಲಿ ಒಂದು ಕೋಟಿ ಮಂದಿ ಕೆಲಸ ಕಳೆದು ಕೊಳ್ಳುತ್ತಿದ್ದಾರೆ. ಕೇವಲ ಅಧಿಕಾರಕ್ಕೆ ಬರಲು, ಮತಕ್ಕಾಗಿ ದೇಶವನ್ನು ವಿಭಜಿಸುತ್ತಿರುವ ಬಿಜೆಪಿ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಯೋಜನೆಗಳ ಮರು ನಾಮಕರಣ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಕೊರೋನಾ ಸಂಕಷ್ಟದಿಂದ ದೇಶವೇ ಶೋಕದಲ್ಲಿದೆ. ಅತ್ಯಾಚಾರ, ಅನಾಚಾರ ಹೆಚ್ಚಾಗಿದೆ ಎಂದು ಅವರು ದೂರಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಕೆಪಿಸಿಸಿ ಬಂಟ್ವಾಳ ಉಸ್ತುವಾರಿ ಸವಿತಾ ರಮೇಶ್, ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯರು ಕಾಂಗ್ರೆಸ್ ವಾಹಿನಿಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ, ಧನಭಾಗ್ಯ ಆರ್ ರೈ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ , ಕೆಪಿಸಿಸಿ ಸದಸ್ಯರಾದ ಮಮತಾ ಗಟ್ಟಿ , ವೀಣಾ ಭಟ್ , ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ , ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ , ಜಿ.ಪಂ. ಮಾಜಿ ಸದಸ್ಯರಾದ ಎಂ. ಎಸ್. ಮೊಹಮ್ಮದ್ , ತುಂಬೆ ಚಂದ್ರ ಪ್ರಕಾಶ ಶೆಟ್ಟಿ , ಪದ್ಮಶೇಖರ ಜೈನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 11 ಮಂದಿ ಹಿರಿಯ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಪಾಣೆ ಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ಸ್ವಾಗತಿಸಿದರು.
ಬಂಟ್ವಾಳ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವಿಲ್ಮಾ ಮೊರಾಸ್ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು .