accused arrested after 36 years- 36 ವರ್ಷದ ಹಿಂದಿನ ಅಪರಾಧ: ಮೂರುವರೆ ದಶಕ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
36 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
1985ರಲ್ಲಿ ನಡೆದಿದ್ದ ಮನೆಗೆ ನುಗ್ಗಿ ದರೋಡೆ ನಡೆಸಿದ ಪ್ರಕರಣದಲ್ಲಿ ಆರೋಪಿ ಲಿಂಗಪ್ಪ, ತಂದೆ: ಬಾಬು ಪೂಜಾರಿ ಎಂಬಾತ ಭಾಗಿಯಾಗಿದ್ದ. ಬಳಿಕ ಪೊಲೀಸರ ಕಣ್ಣಿಗೆ ಮಣ್ಣೆರಚಿ ಕಳೆದ ಮೂರುವರೆ ದಶಕಗಳಿಂದ ತಲೆಮರೆಸಿಕೊಂಡಿದ್ದ.
ಶಿವಮೊಗ್ಗದಲ್ಲಿ 5 ವರ್ಷಗಳಿಂದ ಅಟೋ ಚಾಲಕನಾಗಿದ್ದ. ನಂತರ ಮಂಗಳೂರಿನ ತಣ್ಣೀರು ಬಾವಿ ಎಂಬಲ್ಲಿಗೆ ಬಂದು ತನ್ನ ಹೆಸರನ್ನು ರೆಹಮತ್ ಖಾನ್ , ತಂದೆ: ಅಮ್ಮು ಸಾಹೇಬ್ ಎಂಬುದಾಗಿ ಬದಲಾಯಿಸಿಕೊಂಡು ಅನ್ಯಕೋಮಿನ ಯುವತಿಯನ್ನು ಮದುವೆಯಾಗಿದ್ದ.
ತಣ್ಣೀರಿ ಬಾವಿಯಲ್ಲಿ ವಾಸವಾಗಿದ್ದು, ನ್ಯಾಯಾಲಯ ಹೊರಡಿಸಿದ್ದ ವಾರಂಟ್ ದಸ್ತಗಿರಿಗೆ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ.
ಸುಮಾರು 29 ವರ್ಷಗಳ ಕಾಲ ತಣ್ಣೀರು ಬಾವಿಯಲ್ಲಿ ಕಪ್ಪು ಚಿಪ್ಪು ( ಸೆಲ್ಫಿಸ್ ) ವ್ಯಾಪಾರ ಮಾಡಿಕೊಂಡಿದ್ದು, ನಂತರ ಸುಮಾರು 3 ವರ್ಷಗಳಿಂದ ಓಶಿಯನ್ ಕಂಪೆನಿಯಲ್ಲಿ ಕಂನ್ಸಟ್ರಕ್ಷನ್ ಕೆಲಸವನ್ನು ಮುಂಡಗೋಡಿ, ಹುಬ್ಬಳ್ಳಿ, ಬೆಳಗಾಂ ಮುಂತಾದ ಕಡೆ ಮಾಡಿಕೊಂಡಿದ್ದ.
ಸುಮಾರು ಒಂದು ವಾರದಿಂದ ಮಂಗಳೂರಿನ ತಿರುವೈಲ್ ಗ್ರಾಮ , ವಾಮಂಜೂರು ಹಾಲಿ ವಿಳಾಸಕ್ಕೆ ಬಂದಿದ್ದವನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಪುತ್ತೂರು ನಗರ ಠಾಣಾ ಹೆಚ್ಸಿ 322 ಪರಮೇಶ್ವರವರು ಮತ್ತು ಹೆಚ್ಸಿ 1993 ಕೃಷ್ಣಪ್ಪ ರವರು ಈ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.