Rapist arrested- ಅಪ್ರಾಪ್ತೆಯರನ್ನು ಗರ್ಭಿಣಿಯಾಗಿಸಿ ಪರಾರಿ ಆಗುತ್ತಿದ್ದ ಆರೋಪಿಯನ್ನು ಉಪಾಯವಾಗಿ ಬಂಧಿಸಿದ ಮಹಿಳಾ ಎಸ್‌ಐ!
ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಮರುಳು ಮಾಡಿ, ಬಳಿಕ ಅವರ ಜೊತೆಗೆ ದೈಹಿಕ ಸಂಪರ್ಕ ನಡೆಸಿ, ಗರ್ಭಿಣಿ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಮಹಿಳಾ ಸಬ್ ಇನ್ಸ್ ಪೆಕ್ಟರ್ ವೊಬ್ಬರು ಉಪಾಯವಾಗಿ ಬಂಧಿಸಿದ ಘಟನೆ ನಡೆದಿದೆ.
ಕಳೆದ 15 ತಿಂಗಳಿನಲ್ಲಿ ಆರೋಪಿಯು 6ಕ್ಕೂ ಅಧಿಕ ಹೆಣ್ಣು ಮಕ್ಕಳ ಜೀವನದ ಜೊತೆ ಆರೋಪಿ ಚೆಲ್ಲಾವಾಡಿದ್ದ. ಗರ್ಭಿಣಿಯಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ಆಸ್ಪತ್ರೆಗೆ ಬಂದಳು. ಈ ಬಗ್ಗೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಾಲಕಿಯನ್ನು ವಿಚಾರಣೆ ಮಾಡಿದಾಗ ಆಕೆ ಮಾಹಿತಿ ನೀಡಲು ಹಿಂಜರಿದಿದ್ದಾಳೆ.
ಆಗ ಈ ಪ್ರಕರಣ ಮಹಿಳಾ ಎಸ್ ಐ ಪ್ರಿಯಾಂಕಾ ಶೈನಿ ಅವರ ಕೈಗೆ ಬರುತ್ತದೆ. ಅವರು ಬಾಲಕಿಯ ಬಳಿಯಲ್ಲಿ ಆತ್ಮೀಯವಾಗಿ ನಡೆದುಕೊಂಡು, ಘಟನೆಯ ಮಾಹಿತಿಯನ್ನು ಕಲೆ ಹಾಕುತ್ತಾರೆ. ಬಾಲಕಿ ನೀಡಿದ ಮಾಹಿತಿಯ ಪ್ರಕಾರ, ಆರೋಪಿಯು ಬಾಲಕಿಯ ಮನೆಯ ಸಮೀಪದವನೇ ಆಗಿದ್ದ.
ಆತನ ಜೊತೆಗೆ ಫೇಸ್ ಬುಕ್ ನಲ್ಲಿ ಈಕೆಗೆ ಪರಿಚಯವಾಗಿದ್ದು, ಪರಿಚಯವನ್ನೇ ಬಳಸಿಕೊಂಡ ಆರೋಪಿ ಬಾಲಕಿಯ ಜೊತೆಗೆ ಸಲುಗೆ ಬೆಳೆಸಿಕೊಂಡು ದೈಹಿಕ ಸಂಪರ್ಕ ನಡೆಸಿದ್ದಾನೆ. ಆ ಬಳಿಕ ಬಾಲಕಿ ಗರ್ಭಿಣಿಯಾಗಿದ್ದು, ಈ ವಿಚಾರ ತಿಳಿಯುತ್ತಿದ್ದಂತೆಯೇ ಆತ ಸ್ಥಳದಿಂದ ತಲೆಮರೆಸಿಕೊಂಡಿದ್ದ. ಬಾಲಕಿ ಗರ್ಭಪಾತ ಮಾಡಿಸಲು ಆಸ್ಪತ್ರೆಗಳಿಗೆ ಅಲೆದಾಡುವಂತಾಗಿತ್ತು.
ಬಾಲಕಿಯಿಂದ ಮಾಹಿತಿ ಪಡೆದುಕೊಂಡ ಎಸ್ ಐ ಪ್ರಿಯಾಂಕಾ, ಆರೋಪಿಯ ಫೇಸ್ ಬುಕ್ ನ್ನು ಜಾಲಾಡಿದ್ದು, ಹಲವು ಯುವತಿಯರ ಬಳಿ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ.ಆಗ ಆರೋಪಿಯಿಂದ ಹಲವರು ವಂಚನೆಗೊಳಗಾಗಿರುವುದು ಗೊತ್ತಾಗುತ್ತದೆ. ಆ ಬಳಿಕ, ಪ್ರಿಯಾಂಕಾ ಅವರು ಉಪಾಯವಾಗಿ ತಾವೇ ಒಂದು ನಕಲಿ ಐಡಿ ಸೃಷ್ಟಿಸಿ ಆರೋಪಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಾರೆ.
ಫ್ರೆಂಡ್ ರಿಕ್ವೆಸ್ಟ್ ನೀಡಿದ ತಕ್ಷಣವೇ ಸ್ವೀಕರಿಸಿದ ಆರೋಪಿ, ಚಾಟ್ ಮಾಡಲು ಆರಂಭಿಸಿದ್ದಾನೆ. ಆದರೆ, ಆತನ ವಿವರಗಳನ್ನು ನೀಡಲು ನಿರಾಕರಿಸಿದ್ದು, ನೀನು ನನ್ನ ಬಗ್ಗೆ ತಿಳಿದುಕೊಳ್ಳಬೇಕಾದರೆ, ನನ್ನನ್ನು ಭೇಟಿಯಾಗಬೇಕು. ಎಲ್ಲದರ ಬಗ್ಗೆ ಮಾತನಾಡಬೇಕು ಎಂದು ಷರತ್ತು ಹಾಕಿದ್ದಾನೆ. ಆತನ ಷರತ್ತುಗಳಿಗೆ ಪ್ರಿಯಾಂಕಾ ಒಪ್ಪಿಗೆ ನೀಡಿ ಬಲೆಗೆ ಬೀಳಿಸುತ್ತಾರೆ.
ಹಾಗೆಯೇ ಆರೋಪಿಯನ್ನು ಭೇಟಿ ಮಾಡಲು ಪೊಲೀಸರು ಸಿವಿಲ್ ಡ್ರೆಸ್ ನಲ್ಲಿ ತೆರಳಿದ್ದಾರೆ. ಈ ವೇಳೆ ಆತ ರೈಲ್ವೇ ನಿಲ್ದಾಣಕ್ಕೆ ಬರುವುದಾಗಿ ಹೇಳಿದ್ದರೂ ಅಲ್ಲಿಗೆ ಬಾರದೇ, ಮಹಾವೀರ್ ಎನ್ ಕ್ಲೇವ್ ಗೆ ಬರುವಂತೆ ಹೇಳಿದ್ದ. ಅಲ್ಲಿಗೆ ಪ್ರಿಯಾಂಕಾ ಹೋಗಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ತನ್ನನ್ನು ಭೇಟಿಯಾದ ಯುವತಿಯರಿಗೆ ತನ್ನ ನಿಜವಾದ ಹೆಸರು ಮತ್ತು ಫೋನ್ ನಂಬರ್ ನೀಡದೇ ದೈಹಿಕ ಸಂಪರ್ಕ ನಡೆಸುತ್ತಿದ್ದ ಬಳಿಕ ಅವರಿಂದ ದೂರವಾಗುತ್ತಿದ್ದ ಎಂದು ಪೊಲೀಸರ ವಿಚಾರಣೆಯ ವೇಳೆ ತಿಳಿಸಿದ್ದಾನೆ. ಸದ್ಯ ಆತನ ಬಗ್ಗೆ ಇನ್ನಷ್ಟು ವಿವರಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.