-->
Sagaramala project- ಸಾಗರಮಾಲಾ ಯೋಜನಾ ಪ್ರದೇಶಕ್ಕೆ ಡಿಸಿ ಭೇಟಿ: ಪ್ರತಿಭಟನಾ ನಿರತ ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಯತ್ನ

Sagaramala project- ಸಾಗರಮಾಲಾ ಯೋಜನಾ ಪ್ರದೇಶಕ್ಕೆ ಡಿಸಿ ಭೇಟಿ: ಪ್ರತಿಭಟನಾ ನಿರತ ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಯತ್ನ




ಮಂಗಳೂರಿನ‌ ಬೆಂಗ್ರೆ ಪ್ರದೇಶದಲ್ಲಿ ಸಾಗರ ಮಾಲಾ ಯೋಜನೆಯಡಿ ಕೋಸ್ಟಲ್ ಬರ್ತ್ ಕಾಮಗಾರಿ ಗ್ರಾಮಸ್ಥರ ವಿರೋಧದ ನಡುವೆ ನಡೆಯುತ್ತಿದೆ. ಈ ನಡುವೆ ಕೋಸ್ಟಲ್ ಬರ್ತ್ ಕಾಮಗಾರಿ‌ ತಮ್ಮ ನಾಡದೋಣಿಗಳ ತಂಗುದಾಣಗಳನ್ನು ಆಕ್ರಮಿಸುತ್ತದೆ, ಮೀನುಗಾರರ ಕೆಲವು ಮನೆಗಳನ್ನು ಪರಿಹಾರ ಇಲ್ಲದೆ ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪಿಸಿ ಗ್ರಾಮದ ಸಾಂಪ್ರದಾಯಿಕ ಮೀನುಗಾರರು ತಮ್ಮ ದೋಣಿಗಳನ್ನು ಯೋಜ‌ನಾ ಪ್ರದೇಶದಲ್ಲಿ ಲಂಗರು ಹಾಕಿ ಮೂರು ತಿಂಗಳಿನಿಂದ "ಫಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘ"ದ ನೇತೃತ್ವದಲ್ಲಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ, ಕಾಮಗಾರಿ ತಡೆ ಹಿಡಿದು ಪ್ರತಿಭಟನೆ ನಡೆಸುತ್ತಿದ್ದರು.



ಈ ಮಧ್ಯೆ, ಬಂದರು ಹಾಗು ಮೀನುಗಾರಿಕೆ ಇಲಾಖೆ ಪೊಲೀಸ್ ಬಲ ಪ್ರಯೋಗದೊಂದಿಗೆ ದೋಣಿಗಳನ್ನು ತೆರವುಗೊಳಿಸಲು ಮುಂದಾಗಿತ್ತು. ಆದರೆ, ಮೀನುಗಾರರು ಜಗ್ಗದೆ ಪ್ರತಿಭಟನೆ ಮುಂದುವರಿಸಿದಾಗ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸಾಂಪ್ರದಾಯಿಕ ಮೀನುಗಾರರ ಮುಖಂಡರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಿದ್ದರು.



ಈ ಸಂದರ್ಭ ಮೀ‌ನುಗಾರರ ಪ್ರತಿನಿಧಿಗಳು ಸಾಂಪ್ರದಾಯಿಕ ನಾಡ ದೋಣಿಗಳು ತಂಗಲು ಪರ್ಯಾಯವಾಗಿ ಸೂಕ್ತ ಹಾಗೂ ಅಧಿಕೃತ ವ್ಯವಸ್ಥೆ, ತೆರವುಗೊಳ್ಳುವ ಮೀನುಗಾರರ ಮನೆಗಳಿಗೆ ಬೆಂಗ್ರೆ ಗ್ರಾಮದಲ್ಲಿ ಸೂಕ್ತ ಪುನರ್ವಸತಿ, ಬೆಂಗ್ರೆ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳ ಒದಗಿಸುವುದು, ಜಿಲ್ಲಾಧಿಕಾರಿಗಳು ಸ್ವತಃ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುವುದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟಿದ್ದರು. ಈ ಬೇಡಿಕೆಗಳನ್ನು ಈಡೇರಿಸಿದರೆ ಯೋಜನಾ ಪ್ರದೇಶದಿಂದ ದೋಣಿಗಳನ್ನು ತೆರವುಗೊಳಿಸುವುದಾಗಿ ತಿಳಿಸಿದ್ದರು.








ಮೀನುಗಾರರ ಬೇಡಿಕೆಗಳಿಗೆ ಸಹಮತ ವ್ಯಕ್ತಪಡಿಸಿದ್ದ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಬೆಳಿಗ್ಗೆ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಬೆಂಗ್ರೆಗೆ ಭೇಟಿ ನೀಡಿದರು.



ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಬೇಡಿಕೆಯಂತೆ ನಾಡದೋಣಿ ತಂಗಲು ನದಿ ದಂಡೆಯಲ್ಲಿ ಪರ್ಯಾಯ ಜಾಗ ಗುರುತಿಸಿ ಅಲ್ಲಿಗೆ ಮೂಲಭೂತ ಸೌಲಭ್ಯಗಳ ಜೊತೆಗೆ ಬಂದರು ಇಲಾಖೆಯ ಅಧೀನದ ಆ ಜಮೀನನ್ನು ಮೂರು ದಿನಗಳ ಒಳಗಡೆ ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸಿ ನಾಡದೋಣಿಗಳ ಅಧಿಕೃತ ತಂಗುದಾಣವಾಗಿ ಆದೇಶ ಹೊರಡಿಸುವಂತೆ ಸಹಾಯಕ ಕಮೀಷನರ್ ಹಾಗೂ ತಹಶೀಲ್ದಾರ್ ಅವರಿಗೆ ಸೂಚಿಸಿದರು. 


ಮನೆಗಳನ್ನು ಕಳೆದು ಕೊಳ್ಳಲಿರುವ ಎಂಟು ಕುಟುಂಬಗಳಿಗೆ ಗ್ರಾಮ ವ್ಯಾಪ್ತಿಯಲ್ಲಿಯೇ ಪುನರ್ವಸತಿ ಒದಗಿಸಲು ಬಂದರು ಹಾಗೂ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಯೋಜನೆಯ ಒಳ ಸೇರಲಿರುವ ಮೀನು ಒಣಗಿಸುವ ಜಾಗದಲ್ಲಿ ವೃತ್ತಿ ನಿರತರಾಗಿದ್ದವರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು‌.



ಕೋಸ್ಟಲ್ ಬರ್ತ್ ನಲ್ಲಿ ಸೃಷ್ಟಿಯಾಗುವ ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡಲು ಬೇಕಾದ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕುಡಿಯುವ ನೀರು, ಹಕ್ಕು ಪತ್ರ, ಒಳಚರಂಡಿ ಯೋಜನೆಗಾಗಿ ಕ್ರಮಗಳನ್ನು ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.



ಈ ಸಂದರ್ಭ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಜೊತೆಗೆ ಉಪ ಆಯುಕ್ತ ಮದನ್ ಕುಮಾರ್, ತಹಶೀಲ್ದಾರ್ ಗುರು ಪ್ರಸಾದ್, ಬಂದರು ಇಲಾಖೆಯ ಉಪ ನಿರ್ದೇಶಕ ಮೂರ್ತಿ, ಕಾರ್ಯನಿರ್ವಾಹಕ ಅಧಿಕಾರಿ ಸುಜನ್ ಕುಮಾರ್, ಪಣಂಬೂರು ಎ ಸಿ ಪಿ ಮಹೇಶ್ ಕುಮಾರ್, ಇನ್ಸ್ ಪೆಕ್ಟರ್ ಅಜ್ಮತ್ ಅಲಿ, ಮೀನುಗಾರಿಕೆ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಇದ್ದರು. 


ಗ್ರಾಮಸ್ಥರ ಪರವಾಗಿ ಪಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘ ದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ, ಅಧ್ಯಕ್ಷ ಅಬ್ದುಲ್ ತಯ್ಯೂಬ್ ಬೆಂಗ್ರೆ, ಪ್ರಮುಖರಾದ ಸಾದಿಕ್, ರಿಯಾಜ್, ಹಿದಾಯತ್, ಖಲೀಲ್ ಬೆಂಗ್ರೆ, ಜಮಾತ್ ಉಪಾಧ್ಯಕ್ಷ ಸುಲೈಮಾನ್ ಹಾಜಿ, ಮನಪಾ ಸದಸ್ಯ ಮುನೀಬ್ ಬೆಂಗ್ರೆ, ಡಿವೈಎಫ್ಐ ಮುಖಂಡರಾದ ನೌಷದ್ ಬೆಂಗ್ರೆ, ರಿಜ್ವಾನ್ ಬೆಂಗ್ರೆ, ತೌಸೀಫ್, ನಾಸಿರ್ ಮತ್ತಿತರರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article