ಮಂಗಳೂರಿನಲ್ಲಿ ಆಟಿಕೆ ಕಿಚನ್ ಸೆಟ್ ನಲ್ಲಿ ಸಿಕ್ಕಿತು 10 ಲಕ್ಷ ರೂ ಬಂಗಾರ
ಮಂಗಳೂರು: ಆಟಿಕೆ ಅಡುಗೆ ಸೆಟ್ ನ ಒಳಗೆ ಅಡಗಿಸಿಟ್ಟು ಚಿನ್ನ ಸಾಗಾಟ
ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇಂದು ಮಧ್ಯಾಹ್ನ ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಈ ಪ್ರಯಾಣಿಕ ಚಿನ್ನವನ್ನು ಸ್ಮಗ್ಲಿಂಗ್ ಮಾಡಿ ಸಿಕ್ಕಿಬಿದ್ದಿದ್ದಾನೆ. ಕೇರಳದ ಕಾಸರಗೋಡು ಜಿಲ್ಲೆಯ ಹುಸೈನ್ ರಾಜಿ ಮೊಯ್ದಿನ್ ಅಬೂಬಕ್ಕರ್ (Hussain Raazi Moideen Aboobaker ) ಸ್ಮಗ್ಲಿಂಗ್ ಮಾಡಿ ಸಿಕ್ಕಿಬಿದ್ದ ಪ್ರಯಾಣಿಕ.
ಈತನನ್ನು ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಈತನ ಬಳಿ ಎರಡು ಆಟಿಕೆಯ
ಅಡುಗೆ ಸೆಟ್ ಸಿಕ್ಕಿದೆ. ಇದನ್ಜು ಪರಿಶೀಲಿಸಿದಾಗ ಅದರ ಒಳಗೆ ಚಿನ್ನವನ್ನು ಅಡಗಿಸಿ ಸಾಗಾಟ ಮಾಡುತ್ತಿರುವುದು
ತಿಳಿದುಬಂದಿದೆ. ಈತನ ಬಳಿಯಿಂದ 24 ಕ್ಯಾರೆಟ್ ಶುದ್ದ 219 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇದರ ಮೌಲ್ಯ ರೂ 1055580 ಎಂದು ಅಂದಾಜಿಸಲಾಗಿದೆ. ಚಿನ್ನ ಮತ್ತು ಪ್ರಯಾಣಿಕನನ್ನು ವಶಕ್ಕೆ ಪಡೆದುಕೊಂಡಿರುವ
ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆಯನ್ನು ಮುಂದುವರಿಸಿದ್ದಾರೆ