ಆರ್ಎಸ್ಎಸ್ ಕ್ಯಾನ್ಸರ್ ಇದ್ದಂತೆ ಎಂದ ಜಾವೇದ್ ಗೆ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ
Thursday, September 23, 2021
ಮುಂಬೈ : ಆರ್ಎಸ್ಎಸ್ ವಿರುದ್ಧ ಗಂಭೀರ ಆರೋಪ ಮಾಡಿ ವಿವಾದಾತ್ಮಕ ಹೇಳಿಕೆ ನೀಡಿರುವ ಬಾಲಿವುಡ್ ಗೀತ ರಚನಾಕಾರ ಜಾವೇದ್ ಅಖ್ತರ್ ವಿರುದ್ಧ 100 ಕೋಟಿ ರೂ. ಮಾನ ನಷ್ಟ ಮೊಕದ್ದಮೆ ದಾಖಲಾಗಿದೆ. ವಕೀಲ ಸಂತೋಷ್ ದುಬೆ ಎಂಬವರು ಜಾವೇದ್ ಅಖ್ತರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಆರ್ಎಸ್ಎಸ್ ಕಾರ್ಯಕರ್ತ ಮತ್ತೋರ್ವ ವಕೀಲ ದೃಷ್ಟಿಮಾನ್ ಜೋಶಿಯವರೂ ಅಖ್ತರ್ ವಿರುದ್ಧ ದೂರು ನೀಡಿದ್ದಾರೆ. ‘ಸೆ.4ರಂದು ಜಾವೇದ್ ಅಖ್ತರ್ ಟಿವಿ ಕಾರ್ಯಕ್ರಮವೊಂದರಲ್ಲಿ ಹಿಂದೂ ಸಂಘಟನೆಗಳನ್ನು ತಾಲಿಬಾನ್ಗೆ ಹೋಲಿಸಿದ್ದಾರೆ. ಹಿಂದೂ ಧರ್ಮಕ್ಕಾಗಿ ನಿತ್ಯವೂ ಶ್ರಮಿಸುತ್ತಿರುವ ಸಂಘಟನೆಗಳ ಮಾನಹಾನಿ ಮಾಡುವ ಉದ್ದೇಶದಿಂದಲೇ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಆರ್ಎಸ್ಎಸ್ ಈ ಸಮಾಜದಲ್ಲಿ ಕ್ಯಾನ್ಸರ್ ಇದ್ದಂತೆ ಎಂದು ಹೇಳಿರೋದು ಪೂರ್ವನಿಯೋಜಿತ ಕೆಲಸ. ಇದು ಆರ್ಎಸ್ಎಸ್ಗೆ ಸೇರ್ಪಡೆಗೊಳ್ಳುವವರನ್ನು ದಾರಿ ತಪ್ಪಿಸುವ ಹೇಳಿಕೆಯಾಗಿದೆ’ ಎಂದು ದೂರಿನಲ್ಲಿ ಜೋಶಿ ಆರೋಪಿಸಿದ್ದಾರೆ.
‘ಯಾವುದೇ ಸಾಕ್ಷಿಗಳಿಲ್ಲದೇ ಆರ್ಎಸ್ಎಸ್ ಬಗ್ಗೆ ಜಾವೇದ್ ಅಖ್ತರ್ ಕಟುವಾದ ಹೇಳಿಕೆಗಳನ್ನು ನೀಡಿದ್ದಾರೆ. ದೇಶದ ಪ್ರಧಾನಿ, ರಾಷ್ಟ್ರಪತಿ ಹಾಗೂ ಕೇಂದ್ರದ ಅನೇಕ ಮಂತ್ರಿಗಳು ಆರ್ಎಸ್ಎಸ್ ಬೆಂಬಲಿಗರಾಗಿದ್ದಾರೆ. ಇಂಥಹ ಸಂಘಟನೆಯ ಬಗ್ಗೆ ಜಾವೇದ್ ಅಖ್ತರ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ’ ಎಂದು ದೃಷ್ಟಿಮಾನ್ ಜೋಶಿ ಹೇಳಿದ್ದಾರೆ. ಅ.30ರಂದು ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದೆ.