ನಕಲಿ ಚಿನ್ನದ ಬಿಸ್ಕತ್ತು ನೀಡಿ ವ್ಯಾಪಾರಿಗೆ 1.30 ಕೋಟಿ ರೂ. ಪಂಗನಾಮ: ಎರಡು ತಿಂಗಳ ಬಳಿಕ ವಂಚನೆ ಬಯಲಿಗೆ
Thursday, September 30, 2021
ಬೆಂಗಳೂರು: ಚಿನ್ನದ ವ್ಯಾಪಾರಿಯೋರ್ವರಿಗೆ 3 ಕೆಜಿ ನಕಲಿ ಚಿನ್ನದ ಬಿಸ್ಕತ್ತು ನೀಡಿ 1.30 ಕೋಟಿ ರೂ. ವಂಚನೆ ಮಾಡಿರುವ ಪ್ರಕರಣವೊಂದು ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬೆಂಗಳೂರಿನ ನಗರತ್‌ಪೇಟೆ ಕೆಂಪಣ್ಣ ಲೇನ್‌ನಲ್ಲಿರುವ ಕೆ.ಸಿ.ಆರ್.ಜ್ಯುವಲರ್ಸ್ ಆ್ಯಂಡ್ ಬುಲಿಯನ್ ಮಳಿಗೆ ಮಾಲೀಕ ಕೆ. ರಾಹುಲ್ ಕುಮಾರ್ ಅವರಿಗೆ ಎರಡು ತಿಂಗಳ ಬಳಿಕ ತಾವು ಮೋಸ ಹೋಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಅವರು ಪೊಲೀಸ್ ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ಇಲಿಯಾಸ್ ಖಾನ್ ಎಸ್. ಅಜ್ಮೀರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಚಿನ್ನದ ವ್ಯಾಪಾರಿ ರಾಹುಲ್ ಕುಮಾರ್ ಕಳೆದ ಎಂಟು ತಿಂಗಳಿಂದ ವಂಚನೆ ಆರೋಪಿ ಇಲಿಯಾಸ್ ಖಾನ್ ಎಸ್. ಅಜ್ಮೀರಿ ಬಳಿ ಚಿನ್ನದ ಬಿಸ್ಕತ್ತು ಖರೀದಿಸುತ್ತಿದ್ದರು. ಯಾವತ್ತಿನಂತೆ ಜುಲೈ 20ರಂದು ಇಲಿಯಾಸ್, ರಾಹುಲ್ ಕುಮಾರ್ ಅವರಿಗೆ ಕರೆ ಮಾಡಿ ನಗರತ್‌ಪೇಟೆಗೆ ಬಂದಿರುವುದಾಗಿ ಹೇಳಿದ್ದಾರೆ. ಸಂಜೆ ಓಟಿಸಿ ರಸ್ತೆಯ ಚಿನ್ನದಂಗಡಿಗೆ ಬಂದ ಆರೋಪಿ 3 ಕೆಜಿ ಚಿನ್ನದ ಬಿಸ್ಕತ್ತು ತಂದಿದ್ದು, 1.30 ಕೋಟಿ ರೂ. ಪಾವತಿಸಿದಲ್ಲಿ ಕೊಡುವುದಾಗಿ ಹೇಳಿದ್ದಾನೆ.
ಆಗ ರಾಹುಲ್ ಕುಮಾರ್ ಬಳಿ ಅಷ್ಟೊಂದು ಹಣ ಇರದ ಕಾರಣ ಸ್ವಲ್ಪ ಕಾಲಾವಕಾಶ ಬೇಕೆಂದು ಕೇಳಿಕೊಂಡಿದ್ದಾರೆ. ಅದರಂತೆ ಜುಲೈ 26ರ ಮಧ್ಯಾಹ್ನ 2 ಗಂಟೆಗೆ ಇಲಿಯಾಸ್‌ನ ಭೇಟಿ ಮಾಡಿರುವ ರಾಹುಲ್ ಕುಮಾರ್ ಅವರು 1.30 ಕೋಟಿ ರೂ. ಪಾವತಿಸಿ 3 ಕೆಜಿ ಚಿನ್ನದ ಬಿಸ್ಕತ್ತು ಪಡೆದು ಲಾಕರ್‌ನಲ್ಲಿ ಇಟ್ಟಿದ್ದಾರೆ. ಜೊತೆಗೆ ಈ ಚಿನ್ನದ ಬಿಸ್ಕತ್ತನ್ನು ಮಾರಾಟಕ್ಕೂ ಇಟ್ಟಿದ್ದಾರೆ.
ಇದನ್ನು ತಿಳಿದ ಚಿನ್ನದ ವ್ಯಾಪಾರಿ ಪಾರಸ್ಮಲ್ ಜೈನ್ ಬಿಸ್ಕತ್ತು ಖರೀದಿಗೆ ಮುಂದಾಗಿದ್ದಾರೆ. ಅದರಂತೆ ಅವರು ಸೆ.16ರ ಬೆಳಗ್ಗೆ ರಾಹುಲ್ ಕುಮಾರ್ ಚಿನ್ನದಂಗಡಿಗೆ ಬಂದು ಚಿನ್ನದ ಬಿಸ್ಕತ್ತು ಖರೀದಿ ಮಾಡುವುದಾಗಿ ಹೇಳಿದ್ದಾರೆ. ಮಾರಾಟಕ್ಕೆ ಒಪ್ಪಿದ ಅವರು ಚಿನ್ನದ ಬಿಸ್ಕತ್ತು ಪಡೆದು ಅದರ ಅಸಲಿಯತ್ತನ್ನು ಪರೀಕ್ಷೆ ಮಾಡಿದ್ದಾರೆ. ಆದರೆ ಆಗ ಅದು ನಕಲಿ ಚಿನ್ನವೆಂದು ತಿಳಿದು ಬಂದಿದೆ. ವಿಷಯ ತಿಳಿದು ಆತಂಕಗೊಂಡ ರಾಹುಲ್ ಮತ್ತೊಬ್ಬರ ಬಳಿ ಹೋಗಿ ಚಿನ್ನದ ಅಸಲಿಯತ್ತನ್ನು ಪರೀಕ್ಷೆಗೆ ಒಳಪಡಿಸಿದಾಗಲೂ ನಕಲಿ ಎಂಬುದು ಖಚಿತವಾಗಿದೆ.
ಇತ್ತ ಇಲಿಯಾಸ್‌ಗೆ ಕರೆ ಮಾಡಿದಾಗ ಆತ ಸಂಪರ್ಕಕ್ಕೆ ಸಿಕ್ಕಿಲ್ಲ. ಕೊನೆಗೆ ತಾವು ವಂಚನೆಗೊಳಗಾಗಿರುವುದು ತಿಳಿದು ರಾಹುಲ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.