15ರ ಬಾಲಕಿ ಮೇಲೆ 29ಜನರಿಂದ 9ತಿಂಗಳಿನಿಂದ ಕಾಮಪೈಶಾಚಿಕತೆ: 24 ಮಂದಿ ಅರೆಸ್ಟ್
Thursday, September 23, 2021
ಮುಂಬೈ: ಹದಿನೈದರ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತರು ಸೇರಿದಂತೆ 29 ಜನ ಕಾಮುಕರು ಕಳೆದ 9 ತಿಂಗಳಿನಿಂದ ಸತತವಾಗಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ಬೆಳಕಿಗೆ ಬಂದಿದೆ.
ಈ ವರ್ಷ ಜನವರಿಯಲ್ಲಿ ಸಂತ್ರಸ್ತ ಬಾಲಕಿಯ ಬಾಯ್‍ಫ್ರೆಂಡ್ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಆಕೆಯೊಂದಿಗೆ ಖಾಸಗಿ ಕ್ಷಣಗಳನ್ನು ಕಳೆದ ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ. ಬಳಿಕ ಈ ವೀಡಿಯೋವನ್ನು ಆತ ತನ್ನ ಸ್ನೇಹಿತರ ಜೊತೆ ಹಂಚಿಕೊಂಡಿದ್ದಾನೆ. ಅವರೆಲ್ಲರೂ ಈ ವಿಡಿಯೋವನ್ನು ಇಟ್ಟುಕೊಂಡು ಬೆದರಿಕೆಯೊಡ್ಡಿ ಆಕೆಯ ಮೇಲೆ ಕಾಮಪೈಶಾಚಿಕತೆ ಮೆರೆದಿದ್ದಾರೆ.
ಅಲ್ಲದೆ ಬಾಲಕಿಯ ಬಾಯ್‍ಫ್ರೆಂಡ್ ಆ ವೀಡಿಯೋವನ್ನು ತೋರಿಸಿ ಹೆದರಿಸಿ ಬೆದರಿಸಿ ಮತ್ತೆ ಮತ್ತೆ ಅದೇ ಕೃತ್ಯವನ್ನು ಎಸಗಿದ್ದಾನೆ. ಇದೇ ವೀಡಿಯೋವನ್ನು ಇಟ್ಟುಕೊಂಡು 9 ತಿಂಗಳಿನಲ್ಲಿ ನಾಲ್ಕರಿಂದ ಐದು ಬಾರಿ ವಿವಿಧ ಸ್ಥಳಗಳಲ್ಲಿ ಅಪ್ರಾಪ್ತೆ ಮೇಲೆ 29 ಜನರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ದತ್ತಾತ್ರೇಯ ಕರಾಲೆ ಮಾಹಿತಿ ನೀಡಿದ್ದಾರೆ.
ಘಟನೆಯಿಂದ ಬೇಸತ್ತ ಸಂತ್ರಸ್ತ ಬಾಲಕಿ ಪೊಲೀಸ್ ದೂರು ನೀಡಿದ್ದಾಳೆ. ಇದೀಗ ಪೊಲೀಸರು ಆಕೆ ನೀಡಿರುವ ದೂರಿನ ಆಧಾರದ ಮೇಲೆ 24 ಜನ ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ. ಬಂಧಿತರು ಪ್ರಮುಖ ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡವರಾಗಿದ್ದಾರೆ ಎಂದು ಕರಾಲೆ ಹೇಳಿದ್ದಾರೆ.