16 ಲಕ್ಷ ಗುಳುಂ ಮಾಡಿದ ಪ್ರಿಯಕರ, ತಂಗಿಗೂ ಲೈಂಗಿಕ ದೌರ್ಜನ್ಯ ಎಸಗಿದ್ದ: ಸುಪಾರಿ ಕೊಟ್ಟು ಕೊಲೆಗೈದ ಪ್ರೇಯಸಿ ಜೈಲು ಪಾಲು
Saturday, September 18, 2021
ಕಲಬುರಗಿ: ಕೊಟ್ಟ ಹಣವನ್ನು ವಾಪಸ್ ಕೊಡದೇ, ತಂಗಿಗೂ ಲೈಂಗಿಕ ಕಿರುಕುಳ ನೀಡಿರುವ ಪ್ರಿಯಕರನ ಮೇಲೆ ಸಂಚು ರೂಪಿಸಿ ಪ್ರೇಯಸಿಯೇ ಸುಪಾರಿ ನೀಡಿ ಕೊಲೆ ಮಾಡಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಇದೀಗ ಪ್ರೇಯಸಿ ಸಹಿತ ಸುಪಾರಿ ಕಿಲ್ಲರ್ಸ್ ಪೊಲೀಸ್ ಅತಿಥಿಯಾಗಿದ್ದಾರೆ.
ಮಹಾನಂದಾ, ಸುನೀಲ್, ಮಂಜ, ಮಾರುತಿ, ಅಶೋಕ್ ಹಾಗೂ ಅಂಬರೀಶ್ ಬಂಧಿತ ಆರೋಪಿಗಳು. ಬಿಹಾರ ರಾಜ್ಯದ ಸನ್ ಬಿರ್ ಸಿಂಗ್ (27) ಕೊಲೆಯಾದ ಯುವಕ.
ಮೃತ ಸನ್ ಬಿರ್ ಸಿಂಗ್ ನಿಗೆ ಆಳಂದ ಮೂಲದ ಮಹಾನಂದಾ ಎಂಬಾಕೆಯೊಂದಿಗೆ ಸಂಬಂಧವಿತ್ತು. ಇವರಿಬ್ಬರೂ ಕಳೆದ ಆರು ವರ್ಷಗಳಿಂದ ಲೀವಿಂಗ್ ಟುಗೇದರ್ನಲ್ಲಿದ್ದರು. ಈ ಸಂದರ್ಭ ಸನ್ ಬಿರ್ಸಿಂಗ್ ಪ್ರೇಯಸಿ ಮಹಾನಂದಾಳಿಂದ 16 ಲಕ್ಷ ರೂ. ಹಣ ಪಡೆದುಕೊಂಡಿದ್ದ. ಅದನ್ನು ಕೇಳುವಾಗ ಕೊಡದೆ ಸತಾಯಿಸುತ್ತಿದ್ದ.
ಅಲ್ಲದೆ ಮಹಾನಂದ ಮನೆಯಲ್ಲಿ ಇಲ್ಲದಿರುವಾಗ ಆಕೆಯ ತಂಗಿಯ ಮೇಲೆಯೂ ಸನ್ ಬಿರ್ ಸಿಂಗ್ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಳಿಕ ಮಹಿಳೆಯೋರ್ವಳನ್ನು ಮನೆಗೆ ಕರೆತಂದು ಸರಸವಾಡಿದ್ದ. ಇದರಿಂದ ರೋಸಿ ಹೋಗಿದ್ದ ಮಹಾನಂದಾ 5 ಲಕ್ಷ ರೂ. ಸುಪಾರಿ ನೀಡಿ ಸನ್ ಬೀರ್ ಸಿಂಗ್ ಕೊಲೆಗೆ ಸಂಚು ರೂಪಿಸಿದ್ದಳು.
ಹಂತಕರು ಸನ್ ಬಿರ್ ಕೊಲೆಗೈದು ರೈಲ್ವೆ ಹಳಿಯ ಮೃತದೇಹವನ್ನು ಎಸೆದು ಹೋಗಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ನಿಜ ವಿಚಾರ ಬಯಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಮಂದಿ ಆರೋಪಿಗಳನ್ನು ವಾಡಿ ರೈಲ್ವೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.