ಅಪ್ರಾಪ್ತಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ, ದಂಡ: ಸಹಕರಿಸಿದಾಕೆಗೂ ಶಿಕ್ಷೆ
Monday, September 20, 2021
ಚಾಮರಾಜನಗರ: ವಿವಾಹವಾಗುವುದಾಗಿ ನಂಬಿಸಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 6.25 ಲಕ್ಷ ರೂ. ದಂಡ ವಿಧಿಸಿ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿ ತೀರ್ಪು ನೀಡಿದೆ.
ಚಾಮರಾಜನಗರ ಮೇಗಲ ಉಪ್ಪಾರ ಬೀದಿ ನಿವಾಸಿ ಚಂದ್ರು ಅಲಿಯಾಸ್ ಚಂದ್ರಶೇಖರ್ ಶಿಕ್ಷೆಗೊಳಗಾದ ಆರೋಪಿ.
ಆರೋಪಿ ಚಂದ್ರಶೇಖರ್ ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯೋರ್ವಳನ್ನು ಬಲವಂತವಾಗಿ ಕರೆದೊಯ್ದು ಸಂಬಂಧಿಕೆ ಕೋಡಿಮೋಳೆ ಗ್ರಾಮದ ಮಹಾದೇವಮ್ಮನ ಮನೆಯಲ್ಲಿರಿಸಿದ್ದ. ಈ ಸಂದರ್ಭ ವಿವಾಹವಾಗುವುದಾಗಿ ಆಮಿಷವೊಡ್ಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.
ಈ ವಿಚಾರವನ್ನು ಬಾಲಕಿ ಹೆತ್ತವರಲ್ಲಿ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಬಾಲಕಿಯ ತಾಯಿ ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಾಕ್ಷಿ, ದಾಖಲೆಗಳ ಆಧಾರದ ಮೇಲೆ ಚಂದ್ರಶೇಖರ್ ಮೇಲಿನ ಆರೋಪ ಸಾಬೀತಾಗಿರುವ ಹಿನ್ನಲೆಯಲ್ಲಿ ಆತನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 6.25 ಲಕ್ಷ ರೂ. ದಂಡ ವಿಧಿಸಿದೆ.
ಅಲ್ಲದೆ ಅಪ್ರಾಪ್ತ ಬಾಲಕಿಯನ್ನು ಮನೆಯಲ್ಲಿರಿಸಿಕೊಂಡು ಆರೋಪಿಗೆ ಸಹಕರಿಸಿರುವ ಆತನ ಸಂಬಂಧಿ ಕೋಡಿಮೋಳೆ ಗ್ರಾಮದ ಮಹಾದೇವಮ್ಮನಿಗೂ 5 ವರ್ಷ ಜೈಲು ಶಿಕ್ಷೆ 2 ಲಕ್ಷ ರೂ. ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾಶಿವ ಎಸ್ ಸುಲ್ತಾನಪುರಿ ಆದೇಶಿಸಿದ್ದಾರೆ.