ಮಾರುಕಟ್ಟೆಗೆ ಬಂದಿದೆ ನೋಕಿಯಾ ಸಿ20 ಪ್ಲಸ್ ನೂತನ ಮೊಬೈಲ್: ಹೇಗಿದೆ ಇದರ ಫೀಚರ್
Saturday, September 11, 2021
ನವದೆಹಲಿ: ನೋಕಿಯಾ ಸಂಸ್ಥೆಯು ಇತ್ತೀಚಿಗೆ ಭಾರತದಲ್ಲಿ ನೋಕಿಯಾ ಸಿ20 ಪ್ಲಸ್ ನೂತನ ಮೊಬೈಲ್ ಪೋನ್ ಅನ್ನು ಬಿಡುಗಡೆ ಮಾಡಿದೆ. ಭರ್ಜರಿ ಬ್ಯಾಟರಿ ಬಾಳಿಕೆಯೇ ಈ ಫೋನ್ ವಿಶೇಷ. 4950 ಎಂಎಎಚ್ ಬ್ಯಾಟರಿ ಇದ್ದು, ಇದೇ ಶ್ರೇಣಿಯ ಇತರ ಮೊಬೈಲ್ ಗಳಿಗಿಂತ ದೀರ್ಘಕಾಲ ಇದರ ಬ್ಯಾಟರಿಯು ಬಾಳಿಕೆ ಬರುತ್ತದೆ.
ಆರಂಭಿಕ ದರ್ಜೆಯ ಈ ಫೋನ್, 2 GB ರ್ಯಾಮ್ ಮತ್ತು 32 GB ಆಂತರಿಕ ಸಂಗ್ರಹ ಹಾಗೂ 3GB ರ್ಯಾಮ್ ಮತ್ತು 32 GB ಆಂತರಿಕ ಸಂಗ್ರಹದೊಡನೆ ಲಭ್ಯವಿದೆ. 8,999 ರೂ. ಮತ್ತು 9,999 ರೂ. ಕೈಗೆಟಕುವ ದರದಲ್ಲಿ ನೀಲಿ ಮತ್ತು ಬೂದು ಬಣ್ಣದಲ್ಲಿ ಈ ಫೋನ್ ಲಭ್ಯವಿದೆ. ಕಡಿಮೆ ದರದಲ್ಲಿ ಕೊಳ್ಳಲಿಚ್ಛಿಸುವ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ಈ ಮಾಡೆಲ್ ಹೊರತರಲಾಗಿದೆ. ಈ ಫೋನ್ ನ ವಿನ್ಯಾಸವು ಬಹಳ ಸದೃಢವಾಗಿದ್ದು, ಗಟ್ಟಿಯಾದ ಪಾಲಿಕಾರ್ಬೊನೇಟ್ ಮೇಲ್ಮೈ ಹೊಂದಿದೆ. ಕೈಯಲ್ಲಿರುವಾಗ ಆಗುವ ತೂಕದಿಂದಲೇ ಇದರ ಅನುಭವ ಆಗಲಿದೆ. ಅಲ್ಲದೆ ಕೈಯ್ಯಲ್ಲಿದ್ದಾಗ ಫೋನ್ ಜಾರಿ ಬೀಳದಂತೆ ಹಿಂಬದಿಯಲ್ಲಿ ತರಿಯಾದ ವಿನ್ಯಾಸ ಮಾಡಲಾಗಿದೆ.
ಈ ಫೋನ್ 6.5 ಇಂಚಿನ ಐಪಿಎಸ್ ಎಲ್‍ಸಿಡಿ ಪರದೆ ಹೊಂದಿದ್ದು, ಎಚ್‍ಡಿ ಪ್ಲಸ್ (1440*720) ರೆಸ್ಯೂಲೇಷನ್ ನಲ್ಲಿಯೂ ಪರದೆಯ ವೀಕ್ಷಣೆ ತೃಪ್ತಿಕರವಾಗಿದೆ. ಇದರಲ್ಲಿ ಯೂನಿಸೋಕ್ ಎಸ್9863ಎ ಪ್ರೊಸೆಸರ್ ಇದೆ. ಹೆಚ್ಚಿನವರಿಗೆ ಸ್ನಾಪ್‍ಡ್ರಾಗನ್, ಮೀಡಿಯಾಟೆಕ್, ಎಕ್ಸಿನೋಸ್, ಕಿರಿನ್ ಪ್ರೊಸೆಸರ್ ಹೆಸರುಗಳು ಪರಿಚಿತವಿದ್ದರೂ, ಯೂನಿಸೋಕ್ ಪ್ರೊಸೆಸರ್ ಅಷ್ಟಾಗಿ ಪರಿಚಯವಾಗಿಲ್ಲ. ಇದಕ್ಕೆ ಆಂಡ್ರಾಯ್ಡ್ 11 ಗೋ ಎಡಿಷನ್ ನೀಡಲಾಗಿದ್ದು, ಪ್ಯೂರ್ ಆಂಡ್ರಾಯ್ಡ್ ಅನುಭವ ದೊರಕಲಿದೆ. ಆದರೆ ಪ್ರೊಸೆಸರ್ ವೇಗ ಪರವಾಗಿಲ್ಲ. ಸಾಮಾನ್ಯ ದರದ ಇಂತಹ ಫೋನ್ ಗಳಲ್ಲಿ ಹೆಚ್ಚು ವೇಗ ನಿರೀಕ್ಷಿಸುವಂತೆಯೂ ಇಲ್ಲ!
ಹಿಂಬದಿ ಮುಖ್ಯ ಕ್ಯಾಮರಾ 8 ಮೆ.ಪಿ. ಹಾಗೂ 2 ಮೆ.ಪಿ. ಡೆಪ್ತ್ ಲೆನ್ಸ್ ಇರುವ ಎರಡು ಕ್ಯಾಮರಾ ಇದೆ. ಮುಂಬದಿಗೆ 5 ಮೆ.ಪಿ. ಕ್ಯಾಮರಾ ನೀಡಲಾಗಿದೆ. ಬೆಳಗಿನ ವೇಳೆ, ಚೆನ್ನಾಗಿ ಬೆಳಕಿರುವೆಡೆಗಳಲ್ಲಿ ಫೋಟೋಗಳು ಆ ದರದ ಫೋನುಗಳ ಹೋಲಿಕೆಯಲ್ಲಿ ಚೆನ್ನಾಗಿ ಮೂಡಿಬರುತ್ತವೆ. ಆದರೆ ಕಡಿಮೆ ಬೆಳಕಿರುವಲ್ಲಿ ಹಾಗೂ ರಾತ್ರಿ ವೇಳೆ ಅಷ್ಟೊಂದು ಚೆನ್ನಾಗಿರುವ ಫೋಟೋಗಳು ಬರುವುದಿಲ್ಲ. ಸೆಲ್ಫೀ ಕ್ಯಾಮರಾ ಪರವಾಗಿಲ್ಲ. ಒಟ್ಟಾರೆ ಇದು ಸಾಮಾನ್ಯ ದರದ ಫೋನ್ ಆಗಿರುವುದರಿಂದ ಕ್ಯಾಮರಾ ವಿಭಾಗದಿಂದ ಹೆಚ್ಚು ನಿರೀಕ್ಷಿಸುವಂತಿಲ್ಲ.
ಫುಲ್ ಎಚ್‍ಡಿ ಪರದೆ ಇಲ್ಲದಿರುವುದರಿಂದ ಪವರ್ ಫುಲ್ ಪ್ರೊಸೆಸರ್ ಇರದಿರುವುದರಿಂದ ಬ್ಯಾಟರಿ ಹೆಚ್ಚು ಬಾಳಿಕೆ ಬರುತ್ತದೆ. ಎರಡು ದಿನ ಬ್ಯಾಟರಿ ಇರಲು ಯಾವುದೇ ಅಡ್ಡಿಯಿಲ್ಲ. ಸದ್ಯಕ್ಕೆ ಬರುತ್ತಿರುವ ಫೋನ್‍ಗಳಿಗೆ ಯುಎಸ್‍ಬಿ ಟೈಪ್ ಸಿ ಪೋರ್ಟ್ ನೀಡಲಾಗಿರುತ್ತದೆ. ಈ ಫೋನಿನಲ್ಲಿ ಹಳೆಯ ಮೈಕ್ರೋ ಯುಎಸ್‍ಬಿ ಪೋರ್ಟ್ ಇದ್ದು, 10 ವ್ಯಾಟ್ಸ್ ಚಾರ್ಜರ್ ನೀಡಲಾಗಿದೆ.
ಪ್ರತಿಸ್ಪರ್ಧಿ ಸಂಸ್ಥೆಗಳು 10 ಸಾವಿರ ರೂ.ಗೆ ಇದಕ್ಕಿಂತ ಹೆಚ್ಚು ಸ್ಪೆಸಿಫಿಕೇಷನ್ ನೀಡುತ್ತವೆ. ಆದರೆ ನೋಕಿಯಾ ತಮ್ಮ ಗ್ರಾಹಕರಿಗೆ ಹೆಚ್ಚು ಬಾಳಿಕೆ ದೊರಕುವ ಭರವಸೆಯನ್ನು ಈ ಫೋನ್ ನಲ್ಲಿ ನೀಡುತ್ತದೆ. ನೋಕಿಯಾ ಸಂಸ್ಥೆಯು ಇದಕ್ಕೆ ಎರಡು ವರ್ಷಗಳ ಕಾಲ ಸಾಫ್ಟ್ ವೇರ್ ಅಪ್ ಡೇಟ್ ಮತ್ತು ಸೆಕ್ಯುರಿಟಿ ಅಪ್ ಡೇಟ್ ನೀಡುವುದಾಗಿ ತಿಳಿಸಿದೆ. ಅಲ್ಲದೆ, ವರ್ಷದೊಳಗೆ ಫೋನ್ ನಲ್ಲಿ ದೋಷ ಕಾಣಿಸಿಕೊಂಡು, ರಿಪೇರಿಗೆ ಬಂದರೆ ರಿಪ್ಲೇಸ್‍ಮೆಂಟ್ ಗ್ಯಾರಂಟಿ ನೀಡಿದೆ. ಇದನ್ನು ಈಡೇರಿಸಲು ಸ್ಪೆಸಿಫಿಕೇಷನ್‍ನಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎನಿಸುತ್ತದೆ.