ಮಂಗಳೂರಿನಲ್ಲಿ ತೆಂಗಿನಕಾಯಿ ಕೀಳುವ ವೇಳೆ ಪಿಲಿಕುಂಡೋಲು (ಕಣಜ ಹುಳು) ದಾಳಿ: 24 ವರ್ಷದ ಯುವಕ ಸಾವು
Wednesday, September 22, 2021
ಮಂಗಳೂರು: ಮಂಗಳೂರಿನಲ್ಲಿ ತೆಂಗಿನ ಮರದಿಂದ ಕಾಯಿ ಕೀಳುವ ವೇಳೆ ಪಿಲಿಕುಂಡೋಲು ( ಕಣಜ ಹುಳು) ದಾಳಿ ಮಾಡಿದ ಪರಿಣಾಮ 24 ವರ್ಷದ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ.
ಎಡಪದವಿನ ಪಟ್ಲಚ್ಚಿಲ್‌ನ ನಿವಾಸಿ ಸದಾಶಿವ ಮತ್ತು ಕಮಲಾಕ್ಷಿ ಅವರ ಪುತ್ರ ಕೇಶವ ಯಾನೆ ಕಿಟ್ಟ (24) ಸಾವನ್ನಪ್ಪಿದವರು.ಇವರು ಎಂಸಿಎಫ್‌ನಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು.
ಮನೆಯ ತೆಂಗಿನ ಮರಗಳ ಕಾಯಿ ಕೀಳಲು ಹೊಸದಾಗಿ ಯಂತ್ರವನ್ನು ಇತ್ತೀಚೆಗೆ ಖರೀದಿಸಲಾಗಿತ್ತು. ಇದನ್ನು ಬಳಸಿಕೊಂಡು ಮರ ಏರಿದ ಸಂದರ್ಭದಲ್ಲಿ ಮರದಲ್ಲಿ ಗೂಡು ಕಟ್ಟಿದ್ದ ಪಿಲಿಕುಂಡೋಲು ಗೂಡಿಗೆ ಕೇಶವರ ತಲೆ ತಾಗಿದ ವೇಳೆ ಏಕಾಏಕಿಯಾಗಿ ಪಿಲಿಕುಂಡೋಲು ದಾಳಿ ಮಾಡಿವೆ. ಪಿಲಿ ಕುಂಡೋಲು ದಾಳಿಗೆ ಅವರ ಮೈಮೇಲೆ ಎಪ್ಪತ್ತಕ್ಕೂ ಅಧಿಕ ಕಡೆಗಳಲ್ಲಿ ಗಾಯಗಳಾಗಿವೆ.
ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಿಸದೆ ಕೇಶವ ಅವರು ಕೊನೆಯುಸಿರೆಳೆದಿದ್ದಾರೆ.