ಕೊರೊನಾ ಬಳಿಕ ನಿತಿನ್ ಗಡ್ಕರಿ ಯೂಟ್ಯೂಬ್ ನಿಂದ ತಿಂಗಳಿಗೆ 4 ಲಕ್ಷ ರೂ. ಗಳಿಕೆ
Friday, September 17, 2021
ನವದೆಹಲಿ: ಕೊರೊನಾ ಸೋಂಕಿನ ಲಾಕ್ ಡೌನ್ ನಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಬಹಳಷ್ಟು ಮಂದಿ ಒಂದು ಹೊತ್ತಿನ ಊಟಕ್ಕೂ ಪರದಾಡಿದ ಉದಾಹರಣೆಗಳಿವೆ. ಆದರೆ ಕೇಂದ್ರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಪ್ರಾಧಿಕಾರ ಸಚಿವ ನಿತಿನ್ ಗಡ್ಕರಿಯವರು ಲಾಕ್ ಡೌನ್ ಬಳಿಕ ಯೂಟ್ಯೂಬ್ನಿಂದ ಪ್ರತಿ ತಿಂಗಳು 4 ಲಕ್ಷ ರೂ. ಸಂಪಾದನೆ ಮಾಡಿದ್ದಾರೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ದೆಹಲಿ-ಮುಂಬೈ ಎಕ್ಸ್ಪ್ರೆಸ್ ವೇ ಯೋಜನೆಯ ಪ್ರಗತಿ ಪರಿಶೀಲನೆಗೆಂದು ಹರಿಯಾಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಕೋವಿಡ್ ಸಂದರ್ಭ ತಾನು ಯಾವ ರೀತಿ ಸಮಯದ ಸದುಪಯೋಗ ಮಾಡಿದೆ ಎಂಬುದರ ಬಗ್ಗೆ ಹೇಳಿಕೊಂಡರು.
ಕೊರೊನಾ ಕಾಲದಲ್ಲಿ ತಾನು ಮನೆಯಲ್ಲಿ ಅಡುಗೆ ಮಾಡುವುದು ಹಾಗೂ ವೀಡಿಯೋ ಕಾನ್ಪರೆನ್ಸ್ ಮೂಲಕ ಉಪನ್ಯಾಸ ನೀಡುತ್ತಿದ್ದೆ. ಈ ಆನ್ಲೈನ್ ಉಪನ್ಯಾಸಗಳನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡುತ್ತಿದೆ. ಅದಕ್ಕೆ ನೆಟ್ಟಿಗರಿಂದ ಭಾರಿ ಬೆಂಬಲ ವ್ಯಕ್ತವಾಯಿತು. ಬಹಳಷ್ಟು ಜನರು ಈ ಭಾಷಣಗಳನ್ನು ವೀಕ್ಷಿಸಲು ತೊಡಗಿದರು. ಇದರಿಂದ ಯೂಟ್ಯೂಬ್ ನನಗೆ ಪ್ರತಿ ತಿಂಗಳು 4 ಲಕ್ಷ ರೂ. ಪಾವತಿ ಮಾಡುತ್ತಿದೆ ಎಂದು ಹೇಳಿದರು.