ಚಂದನವನದ ಬೆಡಗಿ ಅದಿತಿ ಪ್ರಭುದೇವಗೆ ತಿಂಗಳಿಗೆ 40 ಸಾವಿರ ರೂ. ದುಡಿಯುವ ಹುಡುಗ ಬೇಕಂತೆ
Sunday, September 12, 2021
ಬೆಂಗಳೂರು: ಕಿರುತೆರೆಯಿಂದ ಹಿರಿತೆರೆಗೆ ಹಾರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಅದಿತಿ ಪ್ರಭುದೇವ ಸದ್ಯದ ಮಟ್ಟಿಗೆ ಕನ್ನಡ ಸಿನಿರಂಗದಲ್ಲಿನ ಬೇಡಿಕೆಯ ನಟಿ. ಇದೀಗ ಇವರು ತಮ್ಮ ಮದುವೆಯಾಗುವ ಹುಡುಗನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
'ತನ್ನನ್ನು ಮದುವೆಯಾಗುವ ಹುಡುಗ ತಿಂಗಳಿಗೆ ಕನಿಷ್ಠ 40 ಸಾವಿರ ರೂ. ಆದ್ರೂ ದುಡಿಯಬೇಕು. ನನ್ನ ಮನಸ್ಸನ್ನು ಅರ್ಥ ಮಾಡಿಕೊಳ್ಳುವವನಾಗಿರಬೇಕು. ಒಂದು ಮನೆ ನಡೆಸಲು ಎಷ್ಟು ಬೇಕೋ ಅಷ್ಟು ದುಡಿದರೂ ಸಾಕು. ಇಂಜಿನಿಯರ್ ಹುಡುಗನೂ ಓಕೆ, ಹೊಲದಲ್ಲಿ ಕೆಲಸ ಮಾಡುವವನೂ ಹುಡುಗನೂ ಓಕೆ' ಎಂದಿದ್ದಾರೆ.
ಅಲ್ಲದೆ 'ತಾನು ಮದುವೆಯಾಗುವ ಹುಡುಗ ತನ್ನ ಹೆತ್ತವರೊಂದಿಗೆ ಇರಬೇಕು. ಆಗ ನಮ್ಮ ಅಪ್ಪ-ಅಮ್ಮನನ್ನು ಆಗಾಗ ಪತಿಯ ಮನೆಗೆ ತಾನು ಕರೆದೊಯ್ಯಬಹುದು. ನನಗೆ ಯಾವುದೇ ರೀತಿಯ ಹುಡುಗನನ್ನು ಹುಡುಕಿದರೂ ನಾನು ಅವರಿಗೆ ಸೆಟ್ ಆಗುತ್ತೇನೆ' ಎಂದಿದ್ದಾರೆ.
'ನನ್ನನ್ನು ಮದುವೆಯಾಗುವ ಹುಡುಗನನ್ನು ಆಯ್ಕೆ ಮಾಡಲು ಅಪ್ಪ-ಅಮ್ಮನಿಗೆ ಸಂಪೂರ್ಣ ಸ್ವಾತಂತ್ರವಿದೆ. ಅವರು ಯಾರನ್ನು ತೋರಿಸುತ್ತಾರೋ ಅವರನ್ನು ಓಕೆ ಅನ್ನುತ್ತೇನೆ. ನಮ್ಮ ಮನೆಯಲ್ಲಿ ಯಾವಾಗ ಮದುವೆಯಾಗು ಅನ್ನುತ್ತಾರೆಯೋ ಅಂದೇ ಆಗುತ್ತೇನೆ. ಹೆತ್ತವರ ವಿರುದ್ಧ ನಾನು ಎಂದೂ ಮಾತನಾಡುವುದಿಲ್ಲ' ಎಂದಿದ್ದಾರೆ.
ತಮ್ಮ ಸಿನಿ ಜರ್ನಿಯನ್ನು ನೆನೆಪಿಸಿಕೊಂಡ ಅವರು 'ತಾನು ಇಷ್ಟು ದೂರ ಬಂದಿದ್ದೇನಾ ಎಂದು ಆಶ್ಚರ್ಯವಾಗುತ್ತದೆ. ನನ್ನನ್ನು ಇಂಜಿನಿಯರಿಂಗ್ ಓದಿಸಿದ್ದೇ ಮದುವೆ ಮಾಡಬೇಕೆಂಬ ಉದ್ದೇಶದಿಂದ. ಉತ್ತಮವಾದ ಶಿಕ್ಷಣ ಕೊಡಿಸಿ ಒಳ್ಳೆಯ ಕಡೆ ಮದುವೆ ಮಾಡಿಕೊಡಬೇಕೆಂದು ಅಪ್ಪ-ಅಮ್ಮ ಯೋಚಿಸಿದ್ದರು. ನನ್ನಲ್ಲಿದ್ದ ಸಾಮರ್ಥ್ಯವನ್ನು ನೋಡಿ ನಮ್ಮ ಮನೆಯವರು ಬೆಂಬಲ ನೀಡಿದರು. ಅದರೊಂದಿಗೆ ದೇವರು ಆಶೀರ್ವಾದದಿಂದ ಇಲ್ಲಿವರೆಗೂ ಬಂದೆ ಎಂದಿದ್ದಾರೆ. ನಾನು ಯಾವುದನ್ನು ಬಯಸಿಲ್ಲ. ಆದರೆ ಬಂದಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಪರಿಶ್ರಮ ಹಾಕಿ ಕೆಲಸ ಮಾಡಿದ್ದೇನೆ' ಎಂದು ತಿಳಿಸಿದರು.
ಇದೇ ವೇಳೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ ಅದಿತಿ, ಕೈತುಂಬಾ ಸಿನಿಮಾ ಇದೆ. ಸದ್ಯಕ್ಕೆ 5ಡಿ, ಓಲ್ಡ್‍ಮಂಕ್ ಮತ್ತು ತೊತಪುರಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ ಎಂದಿದ್ದಾರೆ.