ಶೂಟ್ ಮಾಡಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ವಿದ್ಯಾರ್ಥಿ ಮೃತದೇಹ ಪತ್ತೆ: ಕೇವಲ 500 ರೂ. ಗಾಗಿ ಈ ಕೃತ್ಯ ಎಸಗಿದನೇ ರಾಹುಲ್ ಭಂಡಾರಿ?
Friday, September 17, 2021
ಬೆಂಗಳೂರು: ಪಿಸ್ತೂಲ್ನಿಂದ ಶೂಟ್ ಮಾಡಿಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿಯೋರ್ವ ಮೃತದೇಹವೊಂದು ಬೆಂಗಳೂರಿನ ಸಂಜಯ ನಗರದ ನಂದಿನಿ ಬೂತ್ ಬಳಿಯ ರಸ್ತೆಯಲ್ಲಿ ಪತ್ತೆಯಾಗಿದೆ.
ಆರ್.ಟಿ. ನಗರ ಗಂಗಾ ಬೇಕರಿ ಬಳಿ ನಿವಾಸಿ ರಾಹುಲ್ ಭಂಡಾರಿ(17) ಮೃತಪಟ್ಟ ದುರ್ದೈವಿ.
ಮಿಲಿಟರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಾಹುಲ್ ಪ್ರತಿ ದಿನ ನಸುಕಿನ ವೇಳೆ 3 ಗಂಟೆಗೆ ಎದ್ದು ವ್ಯಾಸಂಗ ಮಾಡುತ್ತಿದ್ದ. ಪ್ರತಿ ದಿನದಂತೆ ಇಂದು ಕೂಡಾ ನಸುಕಿನ ವೇಳೆಯೇ ಎದ್ದು ಸ್ವಲ್ಪ ಹೊತ್ತು ಓದಿದ ಬಳಿಕ ಮನೆಯಿಂದ 4 ಗಂಟೆ ಸುಮಾರಿಗೆ ವಾಕಿಂಗ್ ಮಾಡಲೆಂದು ಹೊರಟಿದ್ದಾನೆ. ಆದರೆ ಬೆಳಗ್ಗಿನ ಜಾವ 5 ಗಂಟೆಯ ವೇಳೆ ತಲೆಯ ಎಡಭಾಗಕ್ಕೆ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಈ ಸಂಬಂಧ ಸದಾಶಿವ ನಗರ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ರಾಹುಲ್ ಭಂಡಾರಿ ಉತ್ತರಾಖಂಡ ಮೂಲದ ಭಗತ್ ಸಿಂಗ್ -ಬಾಬ್ನಾ ದಂಪತಿಯ ಪುತ್ರ. ಭಗತ್ ಸಿಂಗ್ ಕಳೆದ 20 ವರ್ಷಗಳಿಂದ ಬೆಂಗಳೂರು ವಾಸಿಯಾಗಿದ್ದಾರೆ. ಭಗತ್ ಸಿಂಗ್ ನಿವೃತ್ತ ಆರ್ಮಿ ಮ್ಯಾನ್ ಆಗಿದ್ದು, ಆರ್.ಟಿ. ನಗರದ ಗಂಗಾ ಬೇಕರಿ ಬಳಿ ವಾಸವಾಗಿದ್ದಾರೆ. ರಾಹುಲ್ ಭಂಡಾರಿ ಎಸ್ಎಸ್ಎಲ್ ಸಿಯಲ್ಲಿ ಶೇ.90ರಷ್ಟು ಅಂಕ ಪಡೆದಿದ್ದ. ಮನೆಯಲ್ಲಿಯೂ ಓದಬೇಕು ಯಾವುದೇ ಒತ್ತಡ ಇರಲಿಲ್ಲ.
ತನಿಖೆ ಕೈಗೊಂಡಿರುವ ಪೊಲೀಸರು ಮೃತ ರಾಹುಲ್ ಭಂಡಾರಿಯೇ ಶೂಟ್ ಮಾಡಿಕೊಂಡಿರೋದಾ ಅಥವಾ ಬೇರೆ ಯಾರಾದರೂ ಶೂಟ್ ಮಾಡಿದ್ದಾರಾ ಎಂಬುದರ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ರಾಹುಲ್ ಭಂಡಾರಿ ತನ್ನ ತಂದೆಯ ಪಿಸ್ತೂಲ್ನಿಂದಲೇ ಗುಂಡು ಹಾರಿಸಿಕೊಂಡಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ. 500 ರೂ. ಕೊಡದಿರೋದಕ್ಕೆ ಶೂಟ್ ಮಾಡಿಕೊಂಡಿದ್ದಾನಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ನಿನ್ನೆ ರಾಹುಲ್ ಭಂಡಾರಿ ತನ್ನ ತಂದೆಯಲ್ಲಿ 500 ರೂ. ಕೇಳಿದ್ದಾನೆ. ಆದರೆ ಕೊಡಲು ನಿರಾಕರಿಸಿದ ತಂದೆ ಕಾರಣವಿಲ್ಲದೆ ಹಣ ನೀಡುವುದಿಲ್ಲ ಎಂದು ಗದರಿಸಿದ್ದಾರೆ. ಇದರಿಂದ ಬೇಸರಗೊಂಡ ರಾಹುಲ್ ಭಂಡಾರಿ ತನ್ನ ತಂದೆ ಹೆಸರಿನಲ್ಲಿದ್ದ ಪಿಸ್ತೂಲ್ ತೆಗೆದುಕೊಂಡು ಮುಂಜಾನೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.