ಬ್ಯಾಂಕ್ ಎಡವಟ್ಟಿನಿಂದ ವ್ಯಕ್ತಿಯ ಖಾತೆಗೆ 5.5 ಲಕ್ಷ ರೂ. ಜಮೆ: ಮೋದಿ ನೀಡಿರುವ ಹಣವೆಂದು ಖರ್ಚು ಮಾಡಿದ ಭೂಪ
Thursday, September 16, 2021
ಪಾಟ್ನಾ(ಬಿಹಾರ): ಬ್ಯಾಂಕ್ ನಲ್ಲಿ ಹಣ ಟ್ರಾನ್ಸ್ ಫರ್ ವಿಚಾರದಲ್ಲಿ ಯಾರದೋ ಖಾತೆಗೆ ಸೇರಬೇಕಾದ ಹಣ ಮತ್ಯಾರದೋ ಖಾತೆಗೆ ಸೇರುವುದು ಸರ್ವೇ ಸಾಮಾನ್ಯ. ಆದರೆ, ಇಲ್ಲೊಬ್ಬ ತನ್ನ ಖಾತೆಗೆ ಆಕಸ್ಮಿಕವಾಗಿ ಸಂದಾಯವಾಗಿರುವ ಹಣವನ್ನು ವಾಪಸ್ ನೀಡೋದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ.
ಬಿಹಾರದ ಖಗರಿಯಾ ಜಿಲ್ಲೆಯ ಗ್ರಾಮೀಣ ಬ್ಯಾಂಕ್ ನಿಂದ ಆದ ಎಡವಟ್ಟಿನಿಂದ ಮಾನ್ಸಿ ಪೊಲೀಸ್ ಠಾಣೆಯ ಭಕ್ತಿಯಾರ್ಪುರ ಗ್ರಾಮದ ರಂಜಿತ್ ದಾಸ್ ಎಂಬಾತನ ಖಾತೆಗೆ 5.5 ಲಕ್ಷ ರೂ. ಜಮೆಯಾಗಿದೆ. ಆತ ಆ ಹಣವನ್ನು ಖರ್ಚು ಮಾಡಿಕೊಂಡಿದ್ದಾನೆ. ಇದೀಗ ಹಣ ವಾಪಸ್ ಕೊಡಬೇಕೆಂದು ಕೇಳಿದಾಗ ಆತ ವಾಪಸ್ ಕೊಡುವುದಿಲ್ಲ ಎಂದು ಆತ ಹೇಳುತ್ತಿದ್ದಾನೆ.
ಅಲ್ಲದೆ 'ಆ ಹಣವನ್ನು ಮೋದಿ ಅಕೌಂಟ್ಗೆ ಹಾಕಿದ್ದಾರೆ..' ಎಂದು ಸಬೂಬು ನೀಡುತ್ತಿದ್ದಾನೆ. ಈ ಬಗ್ಗೆ ಬ್ಯಾಂಕ್ ಹಲವಾರು ಬಾರಿ ನೋಟಿಸ್ ನೀಡಿದ್ದರೂ, ಆತ ಜಪ್ಪಯ್ಯ ಅಂದರೂ ಹಣ ವಾಪಸ್ ಮಾಡಲಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಆತ 'ಮಾರ್ಚ್ ಗೆ ಹಣ ನನ್ನ ಖಾತೆಗೆ ಜಮೆಯಾಗಿದೆ. ಈ ನಾನು ಹಣ ಸ್ವೀಕರಿಸಿದಾಗ ನನಗೆ ತುಂಬಾ ಸಂತೋಷವಾಗಿದೆ. ದೇಶದ ಜನತೆಯ ಬ್ಯಾಂಕ್ ಖಾತೆಗೆ ಪ್ರಧಾನಿ ಮೋದಿಯವರು 15 ಲಕ್ಷ ರೂ. ಜಮಾ ಮಾಡುವುದಾಗಿ ಭರವಸೆ ನೀಡಿದ್ದರು. ಇದು ಆ ಹಣದ ಮೊದಲ ಕಂತು ಆಗಿರಬಹುದೆಂದು ಭಾವಿಸಿ ಎಲ್ಲಾ ಹಣವನ್ನು ಖರ್ಚು ಮಾಡಿಕೊಂಡಿದ್ದೇನೆ. ಈಗ ನನ್ನ ಬಳಿ ಹಣವಿಲ್ಲ' ಎಂದಿದ್ದಾನೆ.
ಈ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಮಾನ್ಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಆತನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.