ನಟಿ ಜ್ಯೋತಿಕಾ ಸಿನಿಮಾ ನೋಡಿ 9ರ ಬಾಲೆ ತನ್ನ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಪೋಷಕರಿಗೆ ತಿಳಿಸಿದಳು: ಆ ಸಿನಿಮಾ ಯಾವುದು ಗೊತ್ತೇ?
Tuesday, September 28, 2021
ಚೆನ್ನೈ: ಕೆಲವೊಂದು ಸಿನಿಮಾಗಳು ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ನೋಡುಗರ ಮೇಕೆ ಮೇಲೆ ಪ್ರಭಾವ ಬೀರುವುದಂತೂ ನಿಜ. ಬೇರೆ ಬೇರೆ ಮಾಧ್ಯಮಗಳು ಮನುಷ್ಯನ ಮನಸ್ಸಿನ ಮೇಲೆ ಬೀರುವ ಪ್ರಭಾವಕ್ಕಿಂತ ದೃಶ್ಯವೊಂದರಲ್ಲಿ ನೋಡುವ ಸನ್ನಿವೇಶವು ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರುವುದು ಹೆಚ್ಚಿನ ಸಂದರ್ಭದಲ್ಲಿ ಸಾಬೀತಾಗಿದೆ. ಸಿನಿಮಾಗಳು ಹಾಗೆಯೇ ವೈಯಕ್ತಿಕವಾಗಿ ನೋಡುಗರ ಮನಸ್ಸಿನ ಆಳವನ್ನು ಮುಟ್ಟುತ್ತದೆ. ಒಳ್ಳೆಯದೋ ಅಥವಾ ಕೆಟ್ಟದೋ, ಆದರೆ ಸಿನಿಮಾ ಮಾತ್ರ ಪ್ರಭಾವಶಾಲಿ ಮಾಧ್ಯಮ ಎಂಬುದರಲ್ಲಿ ಸಂದೇಹವೇ ಇಲ್ಲ.
ಯಾಕಿಷ್ಟು ಪೀಠಿಕೆ ಅಂದರೆ ಸಿನಿಮಾವೊಂದನ್ನು ನೋಡಿ 9ರ ಬಾಲೆಯೊಬ್ಬಳು ತನ್ನ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯವನ್ನು ಪೋಷಕರಿಗೆ ತಿಳಿಸುತ್ತಾಳೆ. ಇದರಿಂದ ಆರೋಪಿ ಮೇಲೆ ದೂರು ದಾಖಲಾಗುತ್ತದೆ. ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತದೆ. ಆರೋಪಿಗೆ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯೂ ಆಗುತ್ತದೆ. ಅಂದ ಹಾಗೆ ಆ ಸಿನಿಮಾ ಯಾವುದೆಂದು ಕುತೂಹಲವಿದೆಯಲ್ಲ. ಹೌದು 2020ರಲ್ಲಿ ಬಿಡುಗಡೆಯಾದ ನಟಿ ಜ್ಯೋತಿಕಾ ಅಭಿನಯದ 'ಪೊಣ್ಮಗಲ್ ವಂಧಲ್' ಸಿನಿಮಾವನ್ನು ನೋಡಿಯೇ 9ರ ಬಾಲೆಯೊಬ್ಬಳಿಗೆ ತನ್ನ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯವನ್ನು ಗ್ರಹಿಸಲು ಸಾಧ್ಯವಾಯಿತು.
ಈ ಸಿನಿಮಾವನ್ನು ನೋಡಿದ ಬಳಿಕ ಆ ಅಪ್ರಾಪ್ತ ಬಾಲಕಿಗೆ ತಾನು 48 ವರ್ಷದ ತನ್ನ ಸಂಬಂಧಿಯಿಂದಲೇ ಅನೇಕ ಬಾರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ತಿಳಿದು ಬಂದಿದೆ. ತಕ್ಷಣ ಆಕೆ ತನ್ನ ಪಾಲಕರಲ್ಲಿ ಈ ವಿಚಾರವನ್ನು ತಿಳಿಸುತ್ತಾಳೆ. ಪುತ್ರಿಯ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಪಾಲಕರಿಗೆ ತಿಳಿದ ತಕ್ಷಣ ಆತನ ವಿರುದ್ಧ ದೂರು ನೀಡಲಾಗುತ್ತದೆ. ಬಳಿಕ ಆರೋಪಿಯ ಬಂಧನವೂ ಆಗುತ್ತದೆ. ವಿಚಾರಣೆ ನಡೆಸಿರುವ ಹೈಕೋರ್ಟ್ ಆರೋಪಿಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.
ಈ ವಿಷಯ ತಿಳಿಯುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ನಟಿ ಜ್ಯೋತಿಕಾ ಪ್ರತಿಕ್ರಿಯೆ ನೀಡಿದ್ದಾರೆ. ''ಪ್ರತಿಬಾರಿಯೂ ಮಹಿಳೆ ಮೌನವನ್ನು ಮುರಿದು ತನಗಾಗಿ ನಿಲ್ಲಬೇಕು. ಇದರಿಂದ ತನಗೇ ತಿಳಿಯದಂತೆ ಅವಳು ಎಲ್ಲಾ ಮಹಿಳೆಯರ ಪರ ನಿಂತಿರುತ್ತಾಳೆ" ಎಂದು ಹೇಳಿದ್ದಾರೆ.
ಇನ್ನು "ಪೊಣ್ಮಗಲ್ ವಂಧಲ್" ಸಿನಿಮಾದಲ್ಲಿ ಭಾರತದ ನ್ಯಾಯಾಲಯಗಳು ಅತ್ಯಾಚಾರ ಪ್ರಕರಣಗಳನ್ನು ಯಾವ ರೀತಿ ನಿರ್ವಹಿಸುತ್ತದೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಲಾಗಿದೆ. ಅಲ್ಲದೆ ಸಿನಿಮಾದಲ್ಲಿ ಪಿತೃಪ್ರಭುತ್ವದಂತಹ ಗಂಭೀರ ಸಮಸ್ಯೆಯನ್ನು ಸಹ ಚರ್ಚಿಸಲಾಗಿದೆ. ಹಾಗೆಯೇ ನಮ್ಮ ದೇಶದಲ್ಲಿ ಕಾನೂನು ಪ್ರಕ್ರಿಯೆಗಳು ಯಾವ ರೀತಿ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ತೋರಿಸಲಾಗಿದೆ. ಅಲ್ಲದೆ ಮಕ್ಕಳು ತಮ್ಮ ಹೆತ್ತವರೊಂದಿಗೆ ತಮ್ಮ ನಿತ್ಯ ಜೀವನದಲ್ಲಿ ನಡೆದ ಎಲ್ಲವನ್ನೂ ಚರ್ಚಿಸಬೇಕು ಎಂದು ಹೇಳಿರುವ ಒಂದು ದೃಶ್ಯವು ಸಹ ಇದೆ. ಜೆ.ಜೆ. ಫೆಡ್ರಿಕ್ ನಿರ್ದೇಶನವಿರುವ ಈ ಸಿನಿಮಾವನ್ನು, ನಟ ಹಾಗೂ ಜ್ಯೋತಿಕಾ ಪತಿ ಸೂರ್ಯ ನಿರ್ಮಾಣ ಮಾಡಿದ್ದಾರೆ.