ತುಳುವರ ಹೋರಾಟಕ್ಕೆ ಮಣಿದ ಅದಾನಿ ಸಂಸ್ಥೆ: ಕೊನೆಗೂ ಮಂಗಳೂರು ವಿಮಾನ ನಿಲ್ದಾಣ ಹೆಸರು ಬದಲಾವಣೆ
Saturday, September 11, 2021
ಮಂಗಳೂರು: ಕೊನೆಗೂ ತುಳುವರ ಹೋರಾಟಕ್ಕೆ ಮಣಿದ ಅದಾನಿ ಸಂಸ್ಥೆಯು ಮಂಗಳೂರು ವಿಮಾನ ನಿಲ್ದಾಣದ ಅದಾನಿ ಏರ್ಪೋರ್ಟ್ ಹೆಸರನ್ನು ಅಳಿಸಿ ಮತ್ತೆ ಎಲ್ಲಾ ಬೋರ್ಡ್ ಗಳಲ್ಲಿಯೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ನಾಮಫಲಕವನ್ನು ಹಾಕಿದೆ. ಇದು ನಮ್ಮ ಕಾನೂನು ಸಮರಕ್ಕೆ ದೊರೆತ ಜಯವಾಗಿದ್ದು, ಸಂತಸ ತಂದಿದೆ ಎಂದು ಸಾಮಾಜಿಕ ಕಾರ್ಯಕರ್ತ ದಿಲ್ ರಾಜ್ ಆಳ್ವ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಫಲಕದಲ್ಲಿ ಮತ್ತೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂಬ ಹೆಸರನ್ನು ಮತ್ತೆ ಹಾಕಿರೋದು ನಿನ್ನೆ ಬೆಳಗ್ಗೆ ನಮ್ಮ ಗಮನಕ್ಕೆ ಬಂದಿದೆ. ಇದು ನಮ್ಮ ಪ್ರಯತ್ನಕ್ಕೆ ದೊರೆತ ಜಯವಾಗಿದೆ. ಅದಾನಿ ಏರ್ಪೊರ್ಟ್ ಎಂಬ ನಾಮಫಲಕವು ಹಾಗೆಯೇ ಇರಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಯೇ ನಿರ್ಮಾಣ ಮಾಡಿದೆ ಎಂದು ತಪ್ಪು ಅಭಿಪ್ರಾಯ ಮೂಡಲು ಕಾರಣವಾಗುತ್ತದೆ. ಪರಿಣಾಮ ಈ ವಿಮಾನ ನಿಲ್ದಾಣದ ನಿರ್ಮಾಣಕ್ಕೆ, ಏಳಿಗೆಗೆ ಅವಿರತ ಶ್ರಮ ವಹಿಸಿದ ಹಿರಿಯ ರಾಜಕೀಯ ಮುತ್ಸದ್ದಿಗಳ ಪ್ರಯತ್ನಕ್ಕೆ ಯಾವುದೇ ರೀತಿಯ ಬೆಲೆ ಇಲ್ಲದಂತಾಗುತ್ತದೆ ಎಂದರು.
ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಗೆ ಅದಾನಿ ಸಂಸ್ಥೆ ಗುತ್ತಿಗೆ ಪಡೆದಿತ್ತು. ಆ ಬಳಿಕ ಅದಾನಿ ಏರ್ಪೋರ್ಟ್ ಎಂದು ಹೆಸರು ಬದಲಾವಣೆ ಮಾಡಿದೆ. ಇದರ ಬೆನ್ನಲ್ಲೇ ತಾನು ಆರ್ ಟಿಐ ಮೂಲಕ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಅದಾನಿ ಸಂಸ್ಥೆಯ ಗುತ್ತಿಗೆಯ ಒಪ್ಪಂದದ ದಾಖಲೆ ಕೇಳಿದ್ದೆ. ಇದಕ್ಕೆ ಅದಾನಿ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ದೊರಕದಿದ್ದರೂ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರವು ತನಗೆ ಪತ್ರವೊಂದನ್ನು ಬರೆದಿತ್ತು. ಅದರಲ್ಲಿ 'ಗುತ್ತಿಗೆ ಪಡೆದ ಯಾವುದೇ ಸಂಸ್ಥೆಗೂ ಬ್ರ್ಯಾಂಡಿಂಗ್ ಮಾಡುವ ಅಧಿಕಾರವಿಲ್ಲ. ಈ ಬಗ್ಗೆ ನಾವು ಈಗಾಗಲೇ ಅದಾನಿ ಸಂಸ್ಥೆಗೆ ಸ್ಪಷ್ಟ ಪಡಿಸಿದ್ದು, ನೋಟಿಸ್ ಜಾರಿಗೊಳಿಸಿದ್ದೇವೆ' ಎಂದು ತಿಳಿಸಿತ್ತು.
ಅದಾಗಿ ಒಂದು ತಿಂಗಳಲ್ಲಿ ಮಂಗಳೂರು ವಿಮಾನ ನಿಲ್ದಾಣದ ಅಧಿಕೃತ ಟ್ವಿಟರ್, ಎಫ್ ಬಿ ಖಾತೆಗಳಲ್ಲಿ ಅದಾನಿ ಸಂಸ್ಥೆಯ ಹೆಸರನ್ನು ತೆಗೆಯಲಾಗಿತ್ತು. ಇದೀಗ ನೂತನ ಬೆಳವಣಿಗೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದ ಎಲ್ಲಾ ಬೋರ್ಡ್ ಗಳಲ್ಲಿ ಅದಾನಿ ಏರ್ಪೋರ್ಟ್ ಎಂಬ ಹೆಸರು ಅಳಿಸಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ನಾಮಫಲಕವನ್ನು ಮತ್ತೆ ಹಾಕಲಾಗಿದೆ. ಇದರಿಂದ ನಮಗೆ ಬಹಳ ಸಂತಸವಾಗಿದೆ. ಅದೇ ರೀತಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತುಳುನಾಡಿನ ಕಾರಣಿಕ ಪುರುಷರು, ಸಾಧಕರ ಹೆಸರು ಹಾಕುವ ಬಗ್ಗೆ ನಮ್ಮದೇನು ತಕರಾರಿಲ್ಲ ಎಂದು ದಿಲ್ ರಾಜ್ ಆಳ್ವ ಸ್ಪಷ್ಟಪಡಿಸಿದರು.