ಪರಪುರುಷನೊಂದಿಗೆ ಇರುವುದನ್ನು ನೋಡಿದ್ದಾಳೆಂದು ಬಾಲಕಿಯ ಕೈಯನ್ನು ಕುದಿಯುವ ಎಣ್ಣೆಯಲ್ಲಿ ಮುಳುಗಿಸಿದ ಪಾಪಿ ಮಹಿಳೆ
Sunday, September 26, 2021
ಗಾಂಧಿನಗರ (ಗುಜರಾತ್): ಪುರುಷನೋರ್ವನೊಂದಿಗೆ ಇರುವುದನ್ನು ನೋಡಿದ್ದಾಳೆಂಬ ಕಾರಣಕ್ಕೆ 11 ವರ್ಷದ ಬಾಲಕಿಯೊಬ್ಬಳ ಕೈಯನ್ನು ಕುದಿಯುವ ಎಣ್ಣೆಯಲ್ಲಿ ಮುಳುಗಿಸಿ ಸುಟ್ಟು ಹಾಕಿರುವ ಭಯಾನಕ ಘಟನೆ ಗುಜರಾತ್‌ನ ಪಟನ್‌ನ ಸಂತಲ್ಪುರ ಪಟ್ಟಣದಲ್ಲಿ ನಡೆದಿದೆ.
ಬಾಲಕಿಗೆ ಹಿಂಸೆ ನೀಡಿರುವ ಮಹಿಳೆ ಲಖಿ ಮಕ್ವಾನಾ(40)ಳನ್ನು ಪೊಲೀಸರು ಬಂಧಿಸಿದ್ದಾರೆ.
ಲಖಿ ಮಕ್ವಾನಾ ಪರಪುರುಷನೊಂದಿಗೆ ಒಂಟಿಯಾಗಿ ಇದ್ದಿರುವುದನ್ನು ಈ 11 ವರ್ಷದ ಬಾಲಕಿ ನೋಡಿದ್ದಾಳೆಂಬ ಶಂಕೆ ಈ ಮಹಿಳೆಗೆ ಬಂದಿದೆ. ಬಳಿಕ ಮಹಿಳೆ ಬಾಲಕಿಯನ್ನು ಕರೆದು ಈ ಬಗ್ಗೆ ವಿಚಾರಿಸಿದ್ದಾಳೆ. ಆದರೆ ತಾನು ಈ ಕೃತ್ಯವನ್ನು ನೋಡಿಲ್ಲ ಎಂದು ಬಾಲಕಿ ಹೇಳಿದರೂ ನಂಬದ ಮಹಿಳೆ 'ನೀನು ಅದನ್ನು ನೋಡದಿದ್ದರೆ ಕುದಿಯುವ ಎಣ್ಣೆಯಲ್ಲಿ ಕೈಹಾಕುವಂತೆ' ಹೇಳಿದ್ದಾಳೆ. ಇದರಿಂದ ಬೆದರಿದ ಬಾಲಕಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ.
ಆದರೆ ಇದಕ್ಕೆ ಸುಮ್ಮನಾಗದ ಮಹಿಳೆ ಬಾಲಕಿಯ ಕೈಯನ್ನು ಕುದಿಯುತ್ತಿರುವ ಎಣ್ಣೆಗೆ ಮುಳುಗಿಸಿದ್ದಾಳೆ. ನೋವಿನಿಂದ ಚೀರಾಡಿದ ಬಾಲಕಿ ಅಲ್ಲಿಂದ ಓಡಿಹೋಗಿದ್ದಾಳೆ. ಈ ಸಂದರ್ಭ ಅಕ್ಕಪಕ್ಕದವರಿಗೆ ವಿಷಯ ತಿಳಿದು. ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮಹಿಳೆಯನ್ನು ಬಂಧಿಸಿ, ಪ್ರಕರಣ ದಾಖಲು ಮಾಡಿದ್ದಾರೆ.
ಗುಜರಾತಿನ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಜಾಗೃತಿಬೆನ್ ಪಾಂಡ್ಯ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.