ಗಾಂಧೀಜಿಯನ್ನು ಬಿಡ್ಲಿಲ್ಲ, ನಿಮ್ಮನ್ನು ಬಿಡ್ತೇವ... ಎಂದು ಸಿಎಂ ಗೆ ಬೆದರಿಕೆ ಹಾಕಿದ ಪ್ರಕರಣ- ಹಿಂದೂ ಮುಖಂಡರಿಗೆ ಜಾಮೀನು
Wednesday, September 22, 2021
ಮಂಗಳೂರು: ಗಾಂಧೀಜಿಯನ್ನು ಬಿಡಲಿಲ್ಲ, ಅವರನ್ನು ಹತ್ಯೆ ಮಾಡಲಾಯಿತು. ಇನ್ನು ನಿಮ್ಮನ್ನು ಬಿಡುತ್ತೇವೆಯ... ಎಂದು ದೇವಸ್ಥಾನದ ಧ್ವಂಸ ಪ್ರಕರಣದಲ್ಲಿ ಮುಖ್ಯಮಂತ್ರಿಗಳಿಗೆ ಕೊಲೆ ಬೆದರಿಕೆ ಹಾಕಿದ ನಾಲ್ವರು ಹಿಂದೂ ಮುಖಂಡರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರ.ಕಾರ್ಯದರ್ಶಿ ಧರ್ಮೇಂದ್ರ , ಇತರ ಮುಖಂಡರುಗಳಾದ ರಾಜೇಶ್ ಪವಿತ್ರನ್, ಪ್ರೇಮ್ ಪೊಳಲಿ, ಸಂದೀಪ್ ಶೆಟ್ಟಿ ಅವರಿಗೆ ಮಂಗಳೂರಿನ ಎರಡನೇ ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಕಳೆದ ಶನಿವಾರ ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರು ಮೈಸೂರು ದೇವಸ್ಥಾನ ಧ್ವಂಸ ಪ್ರಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿ ಗಾಂಧೀಜಿಯನ್ನು ಬಿಡಲಿಲ್ಲ, ನಿಮ್ಮನ್ನು ಬಿಡ್ತೇವ ಎಂದು ಪ್ರಶ್ನಿಸಿದ್ದರು. ಇದನ್ನು ವಿರೋಧಿಸಿ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಧ್ಯಕ್ಷ ಎಂದು ಹೇಳುತ್ತಿರುವ ಎಲ್ ಕೆ ಸುವರ್ಣ ಅವರು ಧರ್ಮೇಂದ್ರ ವಿರುದ್ದ ಮುಖ್ಯಮಂತ್ರಿ ಗಳಿಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ದೂರು ಸಲ್ಲಿಸಿದ್ದರು. ಈ ದೂರಿನಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ನಾಲ್ವರಿಗೆ ನ್ಯಾಯಾಲಯ ಜಾಮೀನು ನೀಡಿದೆ.