ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದವರಿಗೆ ಸ್ಟೇಷನ್ ನಲ್ಲಿ ಜಾಮೀನು- ಸಡಿಲ ಕೇಸ್ ಹಾಕಿದಕ್ಕೆ ಆಕ್ರೋಶ
Tuesday, September 28, 2021
ಮಂಗಳೂರು; ಆದಿತ್ಯವಾರದಂದು ಮಂಗಳೂರಿನ ಸುರತ್ಕಲ್ ನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಬಂಧಿತರಾದ ಐವರು ಆರೋಪಿಗಳಿಗೆ ಪೊಲೀಸ್ ಠಾಣೆಯಲ್ಲಿ ಜಾಮೀನು ನೀಡಿ ಬಿಡುಗಡೆ ಗೊಳಿಸಲಾಗಿದೆ.
ಮಂಗಳೂರಿನ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಉಡುಪಿ ಯಿಂದ ಮಂಗಳೂರಿಗೆ ವಾಪಾಸು ಬರುವ ವೇಳೆ ಸುರತ್ಕಲ್ ನಲ್ಲಿ ಅಡ್ಡಗಟ್ಟಿದ್ದ ತಂಡ ಕಾರಿನಲ್ಲಿ ಅನ್ಯಮತೀಯ ಜೋಡಿ ಇದೆ ಎಂದು ನೈತಿಕ ಪೊಲೀಸ್ ಗಿರಿ ನಡೆಸಿತ್ತು. ಇದೆಲ್ಲ ಘಟನೆ ಟ್ರಾಫಿಕ್ ಇನ್ಸ್ ಪೆಕ್ಟರ್ ಅವರ ಸಮ್ಮುಖದಲ್ಲಿ ನಡೆದಿತ್ತು.
ಇದರ ವಿಡಿಯೋ ನಿನ್ನೆ ವೈರಲ್ ಆಗುತ್ತಿದ್ದಂತೆ ಐದು ಮಂದಿಯನ್ನು ಬಂಧಿಸಲಾಗಿತ್ತು. ಪ್ರೀತಂ ಶೆಟ್ಟಿ, ಅರ್ಶಿತ್,ಶ್ರೀನಿವಾಸ, ರಾಕೇಶ್ ಮತ್ತು ಅಭಿಷೇಕ್ ಎಂಬವರನ್ನು ಬಂಧಿಸಲಾಗಿತ್ತು. ಆದರೆ ಅವರಿಗೆ ಸ್ಟೇಷನ್ ನಲ್ಲಿ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ.
ಆರೋಪಿಗಳ ಮೇಲೆ ಸಡಿಲ ಕೇಸ್ ಹಾಕಿ ಸ್ಟೇಷನ್ ನಲ್ಲಿ ಬಿಡುಗಡೆ ಮಾಡಿರುವ ಪೊಲೀಸರ ಕ್ರಮಕ್ಕೆ ಡಿವೈಎಫ್ಐ ಆಕ್ರೋಶ ವ್ಯಕ್ತಪಡಿಸಿದೆ. ಆರೋಪಿಗಳ ಮೇಲೆ ಕಠಿಣ ಸೆಕ್ಷನ್ ಹಾಕಿ ಮರುಬಂಧಿಸುವಂತೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.