Bangaluru: ಚಾಮುಂಡಿ ಬೆಟ್ಟದಲ್ಲಿನ ಗ್ಯಾಂಗ್ ರೇಪ್ ನೆನಪು ಮಾಸುವ ಮುನ್ನವೇ ಮತ್ತೊಂದು ಕೃತ್ಯ! ಏಕಾಂತದಲ್ಲಿದ್ದ ಜೋಡಿಯ ವೀಡಿಯೋ ಮಾಡಿ ಬೆದರಿಕೆ
Wednesday, September 29, 2021
ಬೆಂಗಳೂರು: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ನೆನಪು ಮಾಸುವ ಮುನ್ನವೇ ಮತ್ತೊಂದು ಕಹಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆದರೆ, ಅದೃಷ್ಟವಶಾತ್ ಯಾವುದೇ ಹೀನ ಕೃತ್ಯ ನಡೆದಿಲ್ಲ ಎನ್ನುವುದೊಂದು ಸಮಾಧಾನ. ಆದರೆ ಲೈಂಗಿಕ ದೌರ್ಜನ್ಯ ಮತ್ತು ಬ್ಲಾಕ್ ಮೇಲ್ ನಡೆದಿರುವುದು ಬೆಳಕಿಗೆ ಬಂದಿದೆ.
ಯುವತಿಯೋರ್ವಳು ತನ್ನ ಸಂಬಂಧಿಯೊಂದಿಗೆ ಬೆಂಗಳೂರಿನ ಹಂದೇನಹಳ್ಳಿ ಗ್ರಾಮದ ಖಾಸಗಿ ಲೇಔಟ್ಗೆ ಅ.25ರಂದು ಬೆಳಗ್ಗೆ 11 ಗಂಟೆಗೆ ಹೋಗಿದ್ದಾಳೆ. ಕಾರಿನಲ್ಲಿ ಕುಳಿತು ಸ್ನ್ಯಾಕ್ಸ್ ಮತ್ತು ತಂಪು ಪಾನೀಯ ಸೇವಿಸುತ್ತಿದ್ದರು. ಆ ಸಮಯಕ್ಕೆ ಅಲ್ಲಿಗೆ ಕೀಚಕರ ತಂಡವೊಂದು ಬಂದು ಯುವತಿ ಮತ್ತು ಯುವಕನ ಖಾಸಗಿ ಕ್ಷಣಗಳನ್ನು ವೀಡಿಯೊ ಮಾಡಿದೆ. ಅದಕ್ಕಾಗಿ ಕಾರಿನಲ್ಲಿಯೇ ಕುಳಿತುಕೊಳ್ಳುವಂತೆ ತಂಡ ಬೆದರಿಸಿದೆ.
ಅಲ್ಲದೆ, ಯುವತಿಯ ಕೈ ಹಿಡಿದು ಎಳೆದಾಡಿದ್ದಾರೆ. ಜೊತೆಗೆ ಐದು ಲಕ್ಷ ರೂ. ಹಣ ಕೊಡಬೇಕು. ಇಲ್ಲವಾದಲ್ಲಿ ಚಿತ್ರೀಕರಿಸಿರುವ ವೀಡಿಯೋವನ್ನು ವೈರಲ್ ಹರಿಬಿಡೋದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ಅಷ್ಟರಲ್ಲಾಗಲೇ ದೂರದಲ್ಲಿ ಜನರು ಬರುತ್ತಿರುವುದನ್ನು ಗ್ಯಾಂಗ್ ಅಲ್ಲಿಂದ ಎಸ್ಕೇಪ್ ಆಗಿದೆ. ಈ ಆಘಾತದಿಂದ ಚೇತರಿಸಿಕೊಂಡ ಯುವತಿ ಕೆಲ ದಿನಗಳ ಹಿಂದೆ ಈ ಘಟನೆಯ ಬಗ್ಗೆ ದೂರು ನೀಡಿದ್ದಾಳೆ. ಆರೋಪಿಗಳ ಮುಖ ನೋಡಿದಲ್ಲಿ ಗುರುತು ಪತ್ತೆ ಮಾಡೋದಾಗಿ ಹೇಳಿದ್ದಳು. ಯುವತಿ ನೀಡಿರುವ ದೂರಿನನ್ವಯ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೀಚಕರ ಗ್ಯಾಂಗ್ ಪತ್ತೆಗೆ ತನಿಖೆ ನಡೆಸಿದೆ. ಇದೀಗ ಈ ತಂಡ ಪೊಲೀಸರ ಬಲೆಗೆ ಬಿದ್ದಿದೆ. ಹಂದೇನಹಳ್ಳಿ ಗ್ರಾಮದ ಸಯ್ಯದ್ ಆಸಿಫ್ ಫಾಷಾ, ನವಾಜ್ ಪಾಷ, ಲಿಯಾಖತ್ ಪಾಷಾ, ಸಲ್ಮಾನ್ ಖಾನ್, ರೂಹಿದ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಮೊಬೈಲ್ನಲ್ಲಿದ್ದ ಯುವಕ - ಯುವತಿಯ ಖಾಸಗಿ ವೀಡಿಯೋವನ್ನು ಪೊಲೀಸರು ನಾಶ ಮಾಡಿದ್ದಾರೆ.
ಯುವತಿಯ ಮುಂದೆ ಆರೋಪಿಗಳ ಪೆರೇಡ್ ಮಾಡಿಸಿದಾಗ ಯುವತಿ ತಂಡದ ಗುರುತು ಪತ್ತೆ ಹಚ್ಚಿದ್ದಾಳೆ. ಹಂದೇನಹಳ್ಳಿಯವರಾದ ಎಲ್ರೂ ಸಣ್ಣ ಪುಟ್ಟ ಕೆಲಸ ಮಾಡ್ಕೊಂಡಿದ್ದರು. ಅಂದು ಯುವಕ ಯುವತಿ ಏಕಾಂತದಲ್ಲಿದ್ದಾಗ ವೀಡಿಯೋ ಹಿಡಿದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದರೆ ದುರಾದೃಷ್ಟವಶಾತ್ ಯಾವುದೇ ಸಂಭಾವ್ಯ ಅನಾಹುತ ನಡೆದಿಲ್ಲ. ಸದ್ಯ ಎಲ್ಲಾ ಆರೋಪಿಗಳನ್ನು ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದಾರೆ.