ಹ್ಯಾಂಡ್ ಲಾಕ್ ಮಾಡದೆ ದ್ವಿಚಕ್ರ ವಾಹನ ಇಡುವವರೇ ಎಚ್ಚರಿಕೆ: ಮಂಗಳೂರಿನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇಬ್ಬರು
Saturday, September 11, 2021
ಮಂಗಳೂರು: ಅಪಾರ್ಟ್ ಮೆಂಟ್ ಮುಂದೆ ಹ್ಯಾಂಡ್ ಲಾಕ್ ಮಾಡದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದನ್ನು ಎಗರಿಸಿ ಗುಜಿರಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ಇಬ್ಬರು ಖದೀಮರನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದು ಕಂಬಿ ಎಣಿಸುವಂತೆ ಮಾಡಿದ ಘಟನೆ ಮೂಡಬಿದಿರೆಯಲ್ಲಿ ಮೊನ್ನೆ ನಡೆದಿದೆ.
ಶಿಯಾಬುದ್ದಿನ್ ಯಾನೆ ಶಿಯಾಬ್ ಹಾಗೂ ನಿಸಾರ್ ಅರೆಸ್ಟ್ ಆಗಿರುವ ಆರೋಪಿಗಳು.
ಮೂಡುಬಿದಿರೆ ಠಾಣಾ ವ್ಯಾಪ್ತಿಯ ಬಳ್ಳಾಲ್ ಹೊಟೇಲ್ ಬಳಿ ಪೊಲೀಸರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದರು. ಈ ಸಂದರ್ಭ ಬಳ್ಳಾಲ್ ಹೋಟೆಲ್ ಬಳಿ ಇಬ್ಬರು ದ್ವಿಚಕ್ರ ವಾಹನವೊಂದನ್ನು ತಳ್ಳಿಕೊಂಡು ವಿದ್ಯಾಗಿರಿ ಕಡೆಗೆ ಹೋಗುತ್ತಿದ್ದರು. ಅನುಮಾನಗೊಂಡ ಪೊಲೀಸರು ತಕ್ಷಣ ಅವರನ್ನು ತಡೆದು, ನಿಲ್ಲಲು ಸೂಚನೆ ನೀಡಿದ್ದಾರೆ. ಆದರೆ ಪೊಲೀಸರನ್ನು ಕಂಡ ಇಬ್ಬರು ದ್ವಿಚಕ್ರ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ.
ಆದರೆ ಪೊಲೀಸರು ಬೆನ್ನಟ್ಟಿ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಸಂತ್ಯಾಂಶ ಹೊರಬಂದಿದೆ. ಆರೋಪಿಗಳಿಬ್ಬರು ಕೋರ್ಟ್ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ಬಳಿ ಹ್ಯಾಂಡ್ ಲಾಕ್ ಮಾಡದೇ ನಿಲ್ಲಿಸಿದ್ದ ಬೈಕ್ ಅನ್ನು ಕಳವು ಮಾಡಿದ್ದಾರೆ. ಕದ್ದ ಮಾಲನ್ನು ಗುಜಿರಿಗೆ ಮಾರಾಟ ಮಾಡುವ ಉದ್ದೇಶದಿಂದ ದ್ವಿಚಕ್ರ ವಾಹನವನ್ನು ತಳ್ಳಿಕೊಂಡು ಹೋಗುತ್ತಿರುವುದಾಗಿ ಎಂದು ತಪ್ಪೊಪ್ಪಿಕೊಂಡಿದ್ದಾರೆ. ತಕ್ಷಣ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.