ಸ್ನಾನಕ್ಕೆ ಒಲ್ಲೆ ಎನ್ನುವ, ದುರ್ಗಂಧ ಬೀರುವ ಪತ್ನಿಯೊಂದಿಗೆ ಸಂಸಾರ ನಡೆಸಲಾರೆ: ತಲಾಖ್ ಕೊಡಿಸಿ ಎಂದು ನ್ಯಾಯಾಲಯದಲ್ಲಿ ಪತಿಯ ಅಳಲು
Saturday, September 25, 2021
ಲಖನೌ: 'ತನ್ನ ಪತ್ನಿಗೆ ಸ್ನಾನ ಮಾಡೋದು ಅಂದ್ರೆ ಆಗೋಲ್ಲ, ಅದಕ್ಕಾಗಿ ಆಕೆಯನ್ನು ದಿನವೂ ಒತ್ತಾಯ ಮಾಡಬೇಕು. ಸ್ನಾನ ಮಾಡು ಎಂದರೆ ಸಾಕು ಜಗಳ ಶುರು ಮಾಡ್ತಾಳೆ ಇಂಥವಳ ಜೊತೆ ಹೇಗೆ ಬಾಳಲಿ? ಎಂದು ಪತಿಯೋರ್ವನು ಪತ್ನಿಯಿಂದ ತಲಾಖ್ ಕೊಡಿಸಿ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದಾನೆ.
ಉತ್ತರ ಪ್ರದೇಶದ ಅಲೀಘರ್‌ನ ಯುವಕನೋರ್ವನು ಸ್ನಾನ ಮಾಡಲು ಒಲ್ಲದ ಪತ್ನಿಯ ವಿರುದ್ಧ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಕೇಸ್ ಇದೀಗ ಮಹಿಳಾ ಆಯೋಗದ ಮುಂದೆ ಬಂದಿದೆ. ತನಗೆ ಪತ್ನಿಯಿಂದ ದೂರ ಇರಲೇಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಪತಿ ಅಳಲು ತೋಡಿಕೊಂಡಿದ್ದಾನೆ.
ಅಲಿಘರ್‌ನ ಚಂದೌಸ್ ಗ್ರಾಮದ ಯುವಕನಿಗೆ ಅಲ್ಲಿಯೇ ಪಕ್ಕದ ಕ್ವಾರ್ಸಿ ಗ್ರಾಮದ ಯುವತಿಯೊಂದಿಗೆ ವಿವಾಹವಾಗಿದ್ದು, ಒಂದು ವರ್ಷದ ಮಗು ಕೂಡ ಇದೆ. ಆದರೆ ಪತ್ನಿಯ ಸ್ನಾನ ಮಾಡದ ಗುಣದಿಂದ ದಂಪತಿ ಸಾಕಷ್ಟು ಬಾರಿ ಜಗಳವಾಗಿದೆಯಂತೆ. ಈಕೆಯ ಈ ಗುಣದಿಂದ ಬೇಸತ್ತ ಪತಿರಾಯ ಪತ್ನಿ ವಿರುದ್ಧ ಕೋರ್ಟ್‌ಗೆ ಕೇಸ್ ಹಾಕಿ ತಲಾಖ್‌ಗೆ ಅರ್ಜಿ ಸಲ್ಲಿಸಿದ್ದಾನೆ.
ಆದರೆ ಪತ್ನಿ ಮಹಿಳಾ ಆಯೋಗದ ಕದ ತಟ್ಟಿ ಸಹಾಯ ಕೋರಿ 'ತನ್ನ ಪತಿ ತಲಾಖ್‌ಗೆ ಅರ್ಜಿ ಸಲ್ಲಿಸಿದ್ದು, ತನಗಿದು ಇಷ್ಟವಿಲ್ಲ. ನಮ್ಮ ದಾಂಪತ್ಯವನ್ನು ಉಳಿಸಿಕೊಡಬೇಕೆಂದು' ಹೇಳಿದ್ದಾಳೆ. ಇದೀಗ ನ್ಯಾಯಾಲಯದ ನಿರ್ದೇಶನದ ಮೇರೆಗೆ ಮಹಿಳಾ ಆಯೋಗ ಈ ದಂಪತಿಗೆ ಆಪ್ತ ಸಮಾಲೋಚನೆ ನಡೆಸಿದೆ. ಆದರೆ ದಿನವೈ ಸ್ನಾನ ಮಾಡದ ಪತ್ನಿಯೊಂದಿಗೆ ತನಗೆ ಮಲಗಲಾಗುತ್ತಿಲ್ಲ. ಹೀಗಿದ್ದ ಮೇಲೆ ಆಕೆಯ ಜೊತೆ ಸಂಸಾರ ಹೇಗೆ ಮಾಡಲಿ ಎಂದು ಪತಿರಾಯ ಅಳಲು ತೋಡಿಕೊಂಡಿದ್ದಾನೆ. ಆಕೆಗೆ ಸ್ನಾನ ಮಾಡು ಎಂದು ಹೇಳಿದ್ದಲ್ಲಿ ಜಗಳ ಕಾಯುತ್ತಾಳೆ, ಪರಿಣಾಮ ದಿನವೂ ಮನೆಯಲ್ಲಿ ಕಲಹವಾಗಿದೆ ಎಂದಿದ್ದಾನೆ.
ಇದೀಗ ಮಹಿಳಾ ಆಯೋಗವು ಪತಿ ಪತ್ನಿಯನ್ನು ಕೂರಿಸಿ ಇಷ್ಟೊಂದು ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆದುಕೊಳ್ಳದಂತೆ ಬುದ್ಧಿಮಾತು ಹೇಳಿದೆ. ಬಗೆಹರಿಸಬಹುದಾದ ಈ ಸಣ್ಣ ಕಾರಣವನ್ನು ಮುಂದಿರಿಸಿ ವಿಚ್ಛೇದನ ಪಡೆಯುವುದು ಸರಿಯಲ್ಲ. ಇಂತಹ ನಿರ್ಧಾರದಿಂದ ನಿಮ್ಮಿಬ್ಬರ ಮಗುವಿನ ಮೇಲೆ ಪರಿಣಾಮ ಬೀರಲಿದೆ ಎಂದು ಬುದ್ಧಿವಾದ ಹೇಳಿದ್ದಾರೆ. ಮುಂದೇನಾಗತ್ತೋ ಕಾದು ನೋಡಬೇಕಾಗಿದೆ.