ಅತ್ಯಾಚಾರ ಯತ್ನದ ಆರೋಪಿಗೆ ವಿಚಿತ್ರ ಶಿಕ್ಷೆ ನೀಡಿರುವ ನ್ಯಾಯಾಧೀಶ: ಹೀಗೂ ಶಿಕ್ಷೆ ವಿಧಿಸಬಹುದೇ?
Saturday, September 25, 2021
ಪಾಟ್ನಾ: ಮಹಿಳೆಯೊಬ್ಬರನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದ ಆರೋಪಿಯೋರ್ವನಿಗೆ ಬಿಹಾರದ ಮಧುಬನಿ ಕೋರ್ಟ್ ವಿಚಿತ್ರವಾದ ಶಿಕ್ಷೆಯನ್ನು ವಿಧಿಸಿ ಜಾಮೀನು ನೀಡಿದೆ. ಈ ಮೂಲಕ ಆರೋಪಿಯು ಮುಂದಿನ ಆರು ತಿಂಗಳುಗಳ ಕಾಲ ಇಡೀ ಗ್ರಾಮದ ಎಲ್ಲಾ ಮಹಿಳೆಯರ ಬಟ್ಟೆಗಳನ್ನು ಒಗೆದು, ಇಸ್ತ್ರಿ ಹಾಕಿ ಕೊಡಬೇಕೆಂದು ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದಾರೆ.
ಆರೋಪಿ ಲಾಲನ್ ಕುಮಾರ್ ಶಫಿ(20) ಬಟ್ಟೆ ತೊಳೆಯುವ ವೃತ್ತಿ ನಿರ್ವಹಿಸುತ್ತಿದ್ದ. ಈತ ಮಹಿಳೆಯೋರ್ವರನ್ನು ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪದ ಮೇಲೆ ಎಪ್ರಿಲ್ ತಿಂಗಳಲ್ಲಿ ಬಂಧನಕ್ಕೊಳಗಾಗಿದ್ದ. ಆದರೆ ಲಾಲ್ ಕುಮಾರ್ ಶಫಿಯ ಪರ ವಾದಿಸಿರುವ ವಕೀಲರು ಆತನು ಯುವಕನಾಗಿರುವ ಕಾರಣ ಆತನನ್ನು ಕ್ಷಮಿಸಬೇಕೆಂದು ವಾದಿಸಿದ್ದರು. ಜೊತೆಗೆ ತನ್ನ ವೃತ್ತಿಯ ಮೂಲಕ ಸಮಾಜ ಸೇವೆ ಮಾಡುವ ಇಚ್ಛೆಯನ್ನೂ ತನ್ನ ಕಕ್ಷಿದಾರ ಹೊಂದಿರುವುದಾಗಿ ವಕೀಲರು ಕೋರ್ಟ್ ಗೆ ವಾದ ಮಂಡಿಸಿದ್ದರು. ವಿಚಾರಣೆಯನ್ನು ಆಲಿಸಿದ ಜಂಜಾರ್ಪುರ್ ನ್ಯಾಯಾಲಯದ ನ್ಯಾಯಾಧೀಶ ಅವಿನಾಶ್ ಕುಮಾರ್ ಮುಂದಿನ ಆರು ತಿಂಗಳ ಕಾಲ ಇಡೀ ಗ್ರಾಮದ ಮಹಿಳೆಯರ ಬಟ್ಟೆಗಳನ್ನು ಉಚಿತವಾಗಿ ತೊಳೆದು, ಇಸ್ತ್ರಿ ಮಾಡಿ ಕೊಡುವಂತೆ ಷರತ್ತು ವಿಧಿಸಿ ಜಾಮೀನು ನೀಡಿದ್ದಾರೆ.
ಬಟ್ಟೆಯನ್ನು ತೊಳೆಯುವುದು ಹಾಗೂ ಇಸ್ತ್ರಿ ಹಾಕಿ ಕೊಡುವುದರ ಜೊತೆಗೆ ಆರೋಪಿ ತಲಾ 10 ಸಾವಿರ ರೂ. ಮೊತ್ತದ ಎರಡು ಬಾಂಡ್ ಅನ್ನು ನೀಡುವಂತೆ ಕೋರ್ಟ್ ಆರೋಪಿ ಶಫಿಗೆ ತಿಳಿಸಿದೆ. ಈತನ ಉಚಿತ ಸೇವೆಯನ್ನು ಆರು ತಿಂಗಳ ಕಾಲ ಗಮನಿಸಿ ಗ್ರಾಮದ ಮುಖ್ಯಸ್ಥ ಅಥವಾ ಯಾವುದೇ ಸರ್ಕಾರಿ ಅಧಿಕಾರಿಯು ನೀಡುವ ಪ್ರಮಾಣಪತ್ರವನ್ನು ಕೋರ್ಟ್ ಗೆ ಹಾಜರುಪಡಿಸಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.
ನ್ಯಾಯಾಧೀಶ ಅವಿನಾಶ್ ಕುಮಾರ್ ಈ ಹಿಂದೆಯೂ ಇಂತಹ ವಿಲಕ್ಷಣ ಆದೇಶವನ್ನು ನೀಡಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ಶಾಲೆ ತೆರೆದಿರುವ ಆರೋಪ ಎದುರಿಸಿದ್ದ ಶಿಕ್ಷಕಿಯೊಬ್ಬರಿಗೆ ಇಡೀ ಗ್ರಾಮದ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುವಂತೆ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.