ಭರ್ತಿ ನೀರು ತುಂಬಿದ್ದ ಅಂಡರ್ ಪಾಸ್ ನೊಳಗೆ ಸಿಲುಕಿಕೊಂಡ ಕಾರು: ವೈದ್ಯೆ ಮೃತ್ಯು
Tuesday, September 21, 2021
ಚೆನ್ನೈ: ಮಳೆನೀರು ತುಂಬಿಕೊಂಡಿರುವ ಅಂಡರ್ಪಾಸೊಂದರಲ್ಲಿ ಕಾರು ಸಿಲುಕಿಕೊಂಡಿರುವ ಪರಿಣಾಮ ಮಹಿಳಾ ವೈದ್ಯರೊಬ್ಬರು ಮೃತಪಟ್ಟಿರುವ ದುರಾದೃಷ್ಟಕರ ಘಟನೆ ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯಲ್ಲಿ ನಡೆದಿದೆ.
ಹೊಸೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಸಿ.ಸತ್ಯಾ ಮೃತ ದುರ್ದೈವಿ.
ಹೊಸೂರಿನಲ್ಲಿ ಪತಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದ ಸತ್ಯಾ, ಸಂಬಂಧಿಕರ ಮನೆಗೆ ಪುದುಕೊಟ್ಟೈಗೆ ತೆರಳಿದ್ದರು. ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಪುದುಕೊಟ್ಟೈಗೆ ತಮ್ಮ ಅತ್ತೆಯೊಂದಿಗೆ ಹೊರಟಿದ್ದರು. ಆದರೆ ಅಂಡರ್ಪಾಸಿನಲ್ಲಿ ಭರ್ತಿ ನೀರು ತುಂಬಿಕೊಂಡಿತ್ತು.
ಆದರೆ ಇಲ್ಲಿನ ಅಪಾಯದ ಪರಿಸ್ಥಿತಿಯ ಅರಿವಿಲ್ಲದ ಅವರು ನೀರು ತುಂಬಿಕೊಂಡಿದ್ದ ಅಂಡರ್ಪಾಸ್ ಪ್ರವೇಶಿಸಿದ್ದಾರೆ. ಅನತಿ ದೂರ ಸಾಗುತ್ತಿದ್ದಂತೆಯೇ ಕಾರು ನೀರಿನಲ್ಲಿ ಸಿಲುಕಿಕೊಂಡು ಬಾಗಿಲುಗಳು ಜ್ಯಾಮ್ ಆಗಿತ್ತು ಎನ್ನಲಾಗಿದೆ.
ಈ ಬಗ್ಗೆ ಸತ್ಯಾ ತಮ್ಮ ಪತಿಗೆ ಕರೆ ಮಾಡಿ ತಿಳಿಸಿದ್ದಾರೆ. ಅವರು ಸ್ಥಳೀಯರಿಗೆ ಕರೆ ಮಾಡಿ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದು, ಅತ್ತೆಯನ್ನು ಕಾರಿನಿಂದ ಹೊರಗೆಳೆಯಲು ಯಶಸ್ವಿಯಾದರೂ, ಸತ್ಯಾ ಸೀಟ್ ಬೆಲ್ಟ್ ಹಾಕಿರುವುದರಿಂದ ಅವರನ್ನು ಹೊರಗೆಳೆಯಲು ಸ್ವಲ್ಪ ಸಮಯ ಹೋಗಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿಲಾಯಿತಾದರೂ, ಸತ್ಯಾ ಅದಾಗಲೇ ಮೃತಪಟ್ಟಿದ್ದರು. ಅತ್ತೆಗೆ ಚಿಕಿತ್ಸೆ ಮುಂದುವರಿಯುತ್ತಿದೆ.