ಡ್ರೋನ್ ನಲ್ಲಿದ್ದ ಆಹಾರ ಕಸಿಯಲು ಕೊಕ್ಕು ತೂರಿಸಿದ ಕಾಗೆ: ವಿಚಿತ್ರ ವೀಡಿಯೋ ವೈರಲ್
Monday, September 27, 2021
ಆಸ್ಟ್ರೇಲಿಯಾ: ಡೆಲಿವರಿ ಬಾಯ್ ಗಳು ಗ್ರಾಹಕರಿಗೆ ಆಹಾರ ಪೂರೈಕೆ ಮಾಡಲು ಬೈಕ್‌ಗಳಲ್ಲಿ ಸಾಗಾಟ ಮಾಡುತ್ತಿರುವುದು ನಾವೆಲ್ಲಾ ನೋಡಿಯೇ ಇರುತ್ತೇವೆ. ಆದರೆ ಕೆಲವೊಂದು ದೇಶಗಳಲ್ಲಿ ಆಹಾರಗಳನ್ನು ಡ್ರೋನ್ ಮೂಲಕ ಸರಬರಾಜು ಮಾಡಲಾಗುತ್ತದೆ. ಆಸ್ಟ್ರೇಲಿಯಾ ದೇಶದ ರಾಜಧಾನಿ ಕ್ಯಾನ್ಬೆರಾದಲ್ಲಿ ಕೂಡ ಡ್ರೋನ್ ಮೂಲಕ ಆಹಾರವನ್ನು ಸರಬರಾಜು ಮಾಡುತ್ತಿರುವಾಗ ವಿಚಿತ್ರವಾದ ಘಟನೆಯೊಂದು ನಡೆದಿದ್ದು, ಇದೀಗ ಅದರ ವಿಡಿಯೋ ವೈರಲ್ ಆಗಿದೆ.
ಕ್ಯಾನ್ಬೆರಾ ಪ್ರದೇಶದಲ್ಲಿ ಡ್ರೋನ್ ಮೂಲಕ ಆಹಾರವನ್ನು ಸರಬರಾಜು ಮಾಡಲಾಗಿದೆ. ಹೀಗೆ ಹೋಗುತ್ತಿರುವ ಸಂದರ್ಭ ಡ್ರೋನ್ ನಲ್ಲಿ ಆಹಾರವಿರುವುದನ್ನು ಗಮನಿಸಿದ ಕಾಗೆಯೊಂದು ಹಾರಿಬಂದು ಡ್ರೋನ್ ನೊಳಗೆ ಕೊಕ್ಕು ತೂರಿಸಿ ಆಹಾರವನ್ನು ಎಳೆಯಲು ಪ್ರಯತ್ನಿಸಿದೆ.
ಆದರೆ ಪುಣ್ಯವಶಾತ್ ಡ್ರೋನ್‌ಗೆ ಯಾವುದೇ ತೊಂದರೆ ಆಗಿರಲಿಲ್ಲ. ಕಾಗೆ ಕುಕ್ಕಿದ ರಭಸಕ್ಕೆ ಡ್ರೋನ್ ಅತ್ತಿತ್ತ ಅಲುಗಾಡಿದೆಯೇ ಹೊರತು ಯಾವುದೇ ಹಾನಿಯಾಗಲಿಲ್ಲ. ಆದರೆ ಡ್ರೋನ್ ನೊಳಗಿದ್ದ ಆಹಾರ ಕೆಳಗೆ ಬಿದ್ದಿದೆ. ಆಹಾರ ಕೆಳಗೆ ಬೀಳುತ್ತಿದ್ದಂತೆಯೇ ಕಾಗೆ ಅಲ್ಲಿಂದ ಪುರ್ರೆಂದು ಹಾರಿ ಹೋಗಿದೆ. ಇದರ ವೀಡಿಯೋ ವೈರಲ್ ಆಗಿದ್ದು, ಅದೀಗ ನೋಡುಗರನ್ನು ಅಚ್ಚರಿಗೊಳಿಸಿದೆ.