ಶಾಟ್ಸ್ ಧರಿಸಿ ಬಂದ ಯುವತಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದ ಅಧಿಕಾರಿಗಳು: ಕರ್ಟನ್ ಧರಿಸಿ ಪರೀಕ್ಷೆ ಬರೆದಳು!
Friday, September 17, 2021
ತೇಜಪುರ(ಅಸ್ಸಾಂ): ಅಸ್ಸಾಂ ಕೃಷಿ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ಬರೆಯಲು ಶಾರ್ಟ್ಸ್ (ಚಡ್ಡಿ) ಧರಿಸಿ ಬಂದಿದ್ದ ಯುವತಿಗೆ ಅಲ್ಲಿನ ಅಧಿಕಾರಿಗಳು ಪರೀಕ್ಷೆ ಬರೆಯಲು ಬಿಡದೆ ಹಾಲ್ ಹೊರಗೆ ಕಾಯುವಂತೆ ಮಾಡಿದ್ದಾರೆ. ಬಳಿಕ ಆಕೆ ಕರ್ಟನ್ ಸುತ್ತಿ ಪರೀಕ್ಷೆ ಬರೆದ ಘಟನೆ ನಡೆದಿದೆ.
ಉತ್ತರ ಅಸ್ಸಾಂನ ತೇಜ್ ಪುರ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಜುಬ್ಲಿ ತಮೋಲಿ ಎಂಬ ವಿದ್ಯಾರ್ಥಿನಿ ಬಳಿ ಎಲ್ಲ ದಾಖಲೆಗಳಿದ್ದರೂ, ಶಾರ್ಟ್ಸ್ ಧರಿಸಿದ್ದ ಕಾರಣದಿಂದ ಆಕೆಗೆ ಪರೀಕ್ಷಾ ಕೊಠಡಿ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಈ ರೀತಿಯ ವಸ್ತ್ರ ಧರಿಸಿ, ಬಂದವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರವೇಶ ಪತ್ರದಲ್ಲಿ ವಸ್ತ್ರಸಂಹಿತೆ ಉಲ್ಲೇಖವಿಲ್ಲ. ನಾನು ಹಾಫ್ ಪ್ಯಾಂಟ್ ಧರಿಸಿದ್ದೇನೆ ಎಂದು ಯುವತಿ ಹೇಳಿದ್ದರೂ ಆಕೆಗೆ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಅಲ್ಲದೆ 'ಈ ರೀತಿಯ ಬಟ್ಟೆ ಧರಿಸಬಾರದೆಂಬುದು ಸಾಮಾನ್ಯ ಜ್ಞಾನ' ಎಂದು ಅಧಿಕಾರಿಗಳು ಯುವತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಪ್ಯಾಂಟ್ ಧರಿಸಿ, ಪರೀಕ್ಷೆಗೆ ಹಾಜರಾಗಲು ಸೂಚನೆ ನೀಡಿದ್ದಾರೆ. ಕೊನೆಗೆ ತುಂಬಾ ಸಮಯದವರೆಗೆ ಕಾದಿದ್ದ ಯುವತಿ, ತನ್ನ ತಂದೆ ತಂದಿರುವ ಕರ್ಟನ್ ಬಟ್ಟೆಯನ್ನು , ಹಾಕಿಕೊಂಡು ಪರೀಕ್ಷೆ ಬರೆದಿದ್ದಾಳೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.