ಗಂಡೆಂದು ಏಳು ತಿಂಗಳು ಸಂಸಾರ ನಡೆಸಿದ ಮಹಿಳೆಗೆ ಆಮೇಲೆ ಗೊತ್ತಾಗಿದ್ದು ತನ್ನ ಜತೆಗಿದ್ದಿದ್ದು 'ಅವನಲ್ಲ ಅವಳೆಂದು'
Wednesday, September 22, 2021
ಜೈಪುರ (ರಾಜಸ್ಥಾನ): ವಿವಾಹವಾಗಿ ಏಳು ತಿಂಗಳು ಜೊತೆಗಿದ್ದ ಮಹಿಳೆಗೆ ತಾನು ಇಷ್ಟು ದಿನ ಸಂಸಾರ ನಡೆಸಿರೋದು ಗಂಡಸೊಂದಿಗೆ ಅಲ್ಲ ಬದಲಾಗಿ ಹೆಣ್ಣಿನೊಂದಿಗೆ ಎಂದು ಬೆಸ್ತು ಬಿದ್ದ ವಿಚಿತ್ರ ಘಟನೆಯೊಂದು ರಾಜಸ್ಥಾನದ ಜೈಪುರದ ಕೋಟಾ ಎಂಬಲ್ಲಿ ನಡೆದಿದೆ.
30 ವರ್ಷದ ಮಹಿಳೆಯೋರ್ವಳು ಮೋಸ ಹೋದಾಕೆ. ಈ ಮಹಿಳೆಯ ಪತಿ ಮೃತಪಟ್ಟಿದ್ದು, ಇಬ್ಬರು ಮಕ್ಕಳಿದ್ದರು. ಜೀವನ ನಡೆಸಲೆಂದು ನಾರಿಶಾಲಾ ಎಂಬ ಮಹಿಳಾ ಆಶ್ರಮದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು.
ಇದೇ ಆಶ್ರಮಕ್ಕೆ ವಿಕಾಸ್ ಎಂಬಾತ ಬಂದಿದ್ದ. ಅಸಲಿಯತ್ತು ಎಂದರೆ ಆತ ವಿಕಾಸ್ ಆಗಿರದೆ ವಿಜೇತಾ ಎಂಬ ಯುವತಿಯಾಗಿದ್ದಳು. ಆದರೆ ನೋಡಲು ಪುರುಷನಂತೆ ಇದ್ದಿದ್ದು ಮಾತ್ರವಲ್ಲದೇ ದನಿ ಕೂಡ ಗಂಡಸರಂತೆಯೇ ಇತ್ತು. ಈ ಮೂಲಕ ಏಮಾರಿಸಿ ತಾನು ಪುರುಷನೆಂದು ಬಿಂಬಿಸಿದ್ದ.
ಆದರೆ ಅದು ಮಹಿಳಾ ಆಶ್ರಮವಾಗಿರುವುದರಿಂದ ಇಲ್ಲಿಗೇಕೆ ಬಂದೆ ಎಂದು ಕೇಳಿದಾಗ ಏನೇನೋ ಸಬೂಬು ಹೇಳಿ ಅಲ್ಲಿಯೇ ಉಳಿದುಕೊಂಡಿದ್ದಾನೆ.
ಬಳಿಕ ನಿಧಾನವಾಗಿ ಈ ಮಹಿಳೆಯ ಪರಿಚಯ ಮಾಡಿಕೊಂಡು, ಆಕೆ ವಿಧವೆ ಹಾಗೂ ತಕ್ಕಮಟ್ಟಿಗೆ ಸ್ಥಿತಿವಂತೆ, ಚಿನ್ನಾಭರಣಗಳೂ ಇವೆ ಎಂಬುದನ್ನು ಅರಿತುಕೊಂಡಿದ್ದಾಳೆ ಪುರುಷ ವೇಷದಲ್ಲಿರುವ ವಿಜೇತಾ. ಆಕೆಯ ಅಮಾಯಕತನವನ್ನು ಹೇಗಾದರೂ ದುರುಪಯೋಗಪಡಿಸಬಹುದು ಅಂದುಕೊಂಡಿದ್ದಳು. ಈ ನಡುವೆ ಮಹಿಳೆಗೆ ಬಾಳು ಕೊಡುವುದಾಗಿ ಕೂಡಾ ಹೇಳಿದ್ದಾಳೆ. ಮಹಿಳೆಗೂ ಗಂಡು ಜೀವದ ಅಗತ್ಯವಿದ್ದುದರಿಂದ ಆಕೆ ಒಪ್ಪಿಕೊಂಡಿದ್ದಾಳೆ.
ಹೀಗೆ ಇಬ್ಬರ ವಿವಾಹ ನಡೆದಿದೆ. ಇಬ್ಬರೂ ಏಳು ತಿಂಗಳು ಸಂಸಾರ ನಡೆಸಿದ್ದಾರೆ. ಆದರೆ ದೈಹಿಕ ಸಂಪರ್ಕ ಎಂಬ ವಿಚಾರ ಬಂದಾಗ ವಿಜೇತಾ ತನ್ನ ಹೆಣ್ತತನದ ಗುಟ್ಟನ್ನು ಮರೆಮಾಡಲು ಕಥೆ ಹೆಣೆದಿದ್ದಾಳೆ. ಅದೇನೆಂದರೆ 'ತನ್ನನ್ನು ಯಾರಾದರೂ ಬೆತ್ತಲೆಯಾಗಿ ನೋಡಿದರೆ ಸಾಯುತ್ತಾರೆ ಎಂದು ಮಂತ್ರವಾದಿಯೊಬ್ಬ ಹೇಳಿದ್ದಾಗಿ ನಂಬಿಸಿ ತಾನು ಲೈಂಗಿಕ ಕ್ರಿಯೆ ನಡೆಸುವಂತಿಲ್ಲ ಎಂದಿದ್ದಳು.
ಇದರಿಂದ ಹೆದರಿ ಮಹಿಳೆ ಕೂಡಾ ಇದಕ್ಕೆ ಒಪ್ಪಿಕೊಂಡಿದ್ದಾಳೆ. ಏಳು ತಿಂಗಳ ಬಳಿಕ ಒಂದು ದಿನ ಮಹಿಳೆಯ ಸುಮಾರು 1.5 ಲಕ್ಷ ರೂ. ನಗದು ಹಾಗೂ ಸುಮಾರು 3 ಲಕ್ಷ ರೂ. ಚಿನ್ನದ ಒಡವೆ ದೋಚಿ ವಿಜೇತಾ ಪರಾರಿಯಾಗಿದ್ದಾಳೆ.
ಇತ್ತ ಮಹಿಳೆ ತನ್ನ ಪತಿ ಚಿನ್ನಾಭರಣ, ನಗದು ಕಳವುಗೈದು ಪರಾರಿಯಾಗಿದ್ದಾನೆಂದು ಪೊಲೀಸ್ ದೂರು ದಾಖಲಿಸಿದ್ದಾಳೆ. ಪೊಲೀಸರು ಜಾಡು ಹಿಡಿದು ವಿಜೇತಾಳನ್ನು ಬಂಧಿಸಿದ್ದಾರೆ. ಆದರೆ ಅವರಿಗೆ ಅನುಮಾನ ಬಂದು ತಮ್ಮದೇ ರೀತಿಯಲ್ಲಿ ತನಿಖೆ ಮಾಡಿದಾಗ ಆಕೆ ಅವನಲ್ಲ ಅವಳು ಎಂದು ತಿಳಿದಿದೆ. ಅಚ್ಚರಿಯ ವಿಚಾರವೇನೆಂದರೆ ಪೊಲೀಸರು ತಿಳಿಸಿದ ಮೇಲಷ್ಟೇ ಮಹಿಳೆಗೆ ತಾನು ಪತಿ ಎಂದು ತಿಳಿದುಕೊಂಡವ ಹೆಣ್ಣು ಎಂದು ತಿಳಿದಿದ್ದು.