ಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ಐವರು ಮಕ್ಕಳು ಸಮುದ್ರಪಾಲು: ಇಬ್ಬರ ರಕ್ಷಣೆ, ಮೂವರು ನಾಪತ್ತೆ
Monday, September 20, 2021
ಮುಂಬೈ: ನಗರದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಸಮುದ್ರಕ್ಕಿಳಿದ ಐವರು ಮಕ್ಕಳು ನೀರುಪಾಲಾದ ಘಟನೆ ವೆರ್ಸೋವಾ ಜೆಟ್ಟಿಯಲ್ಲಿ ರವಿವಾರ ರಾತ್ರಿ ನಡೆದಿದೆ. ಈ ಪೈಕಿ ಇಬ್ಬರು ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಪ್ರಕಟಿಸಿದೆ.
ರಕ್ಷಿಸಿರುವ ಇಬ್ಬರು ಮಕ್ಕಳನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈ ಅಗ್ನಿಶಾಮಕ ದಳದ ಸಿಬ್ಬಂದಿ ನಾಪತ್ತೆಯಾದ ಮೂವರು ಮಕ್ಕಳ ಪತ್ತೆಯಾಗಿ ಶೋಧ ಕಾರ್ಯ ಮುಂದುವರಿಸಿದೆ.
"ವೆರ್ಸೋವಾ ಜೆಟ್ಟಿಯಲ್ಲಿ ನಡೆದ ಈ ದುರಾದೃಷ್ಟಕರ ಅವಘಡದಲ್ಲಿ ಗಣೇಶ ಮೂರ್ತಿ ವಿಸರ್ಜನೆಗಾಗಿ ಸಮುದ್ರಕ್ಕೆ ಜಿಗಿದಿರುವ ಐವರು ಮಕ್ಕಳು ಸಮುದ್ರದ ಸೆಳೆತಕ್ಕೆ ಸಿಲುಕಿದ್ದರು. ಅವರಲ್ಲಿ ಇಬ್ಬರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಳಿದ ಮೂವರು ಮಕ್ಕಳ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ" ಎಂದು ಬಿಎಂಸಿ ಟ್ವೀಟ್ ಮಾಡಿದೆ.
"ಮಕ್ಕಳು ಸಮುದ್ರದ ಅಲೆಗೆ ಸಿಲುಕಿ ಅವಘಡಕ್ಕೀಡಾದ ಸ್ಥಳ ಗಣೇಶ ಮೂರ್ತಿ ವಿಸರ್ಜನೆಗೆ ನಿಗದಿಪಡಿಸಿರುವ ಸ್ಥಳವಾಗಿರಲಿಲ್ಲ. ಯಾರೂ ಈ ಸ್ಥಳಕ್ಕೆ ಬಾರದಂತೆ ನಿರ್ಬಂಧಿಸಿದ್ದೆವು. ಅದರ ನಡುವೆ ಕೆಲವರು ಕಿಡಿಗೇಡಿತನದಿಂದ ಗಣಪತಿ ವಿಸರ್ಜನೆಗಾಗಿ ಇಲ್ಲಿಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮನೋಜ್ ವಾಮನ ಪೋಹನೇಕರ್ ಹೇಳಿದ್ದಾರೆ.
ನಾಪತ್ತೆಯಾಗಿರುವ ಮಕ್ಕಳ ಶೋಧ ಕಾರ್ಯಕ್ಕೆ ನೌಕಾಪಡೆಯ ಮುಳುಗು ತಜ್ಞರು ಮತ್ತು ಪೊಲೀಸ್ ಬೋಟ್ ಅನ್ನು ಕೋರಲಾಗಿದೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಹೇಳಿಕೆ ನೀಡಿದ್ದಾರೆ.