Karnataka HC Stay on RBI Notification- ಸಹಕಾರ ಬ್ಯಾಂಕ್‌ಗಳಿಗೆ ವ್ಯವಸ್ಥಾಪಕ ನಿರ್ದೇಶಕರ ನೇಮಕಾತಿ: ಆರ್‌ಬಿಐ ಸುತ್ತೋಲೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ
ಸಹಕಾರ ಬ್ಯಾಂಕ್‌ಗಳಿಗೆ ವ್ಯವಸ್ಥಾಪಕ ನಿರ್ದೇಶಕರ ನೇಮಕಾತಿ: ಆರ್‌ಬಿಐ ಸುತ್ತೋಲೆಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ
ಬೆಂಗಳೂರು: ಪಟ್ಟಣ ಸಹಕಾರ ಬ್ಯಾಂಕ್‌ಗಳಿಗೆ ವ್ಯವಸ್ಥಾಪಕ ನಿರ್ದೇಶಕ(ಸಿಇಓ)ರನ್ನು ನೇಮಕ ಮಾಡಬೇಕು ಎಂಬ ಭಾರತೀಯ ರಿಸರ್ವ್ ಬ್ಯಾಂಕ್ ಸುತ್ತೋಲೆ ಸಹಕಾರ ಕ್ಷೇತ್ರದಲ್ಲಿ ಭಾರೀ ಸಂಚಲನ ಮೂಡಿಸಿತ್ತು.
ದಿನಾಂಕ 25-06-2021ರಂದು ಸುತ್ತೋಲೆ ಹೊರಡಿಸಿದ್ದ ಆರ್‌ಬಿಐ, ದೇಶದ ಎಲ್ಲ ಪಟ್ಟಣ ಸಹಕಾರ ಬ್ಯಾಂಕುಗಳು ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿತ್ತು.
ಸಿಇಒ ನೇಮಕಾತಿ ಕುರಿತ ಎಲ್ಲ ಪ್ರಕ್ರಿಯೆಗಳನ್ನು ಆಗಸ್ಟ್ 2021ರೊಳಗೆ ಪೂರ್ಣಗೊಳಿಸುವಂತೆ ಅದು ತನ್ನ ನೊಟೀಫಿಕೇಷನ್‌ನಲ್ಲಿ ಸೂಚಿಸಿತ್ತು.
ಆದರೆ, ಇದೀಗ ಅದಕ್ಕೆ ತಡೆ ಬಿದ್ದಿದೆ. ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮಹಾಮಂಡಳದ ಆಡಳಿತ ಮಂಡಳಿ ಹಾಕಿದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಈ ಸುತ್ತೋಲೆ ಜಾರಿ ಮಾಡದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಈ ಎರಡು ತಿಂಗಳ ಅವಧಿಯಲ್ಲಿ ನೇಮಕಾತಿ ಪ್ರಕ್ರಿಯೆಗಳು ಪೂರ್ಣ ಗೊಳ್ಳಲು ಸಾಧ್ಯವಿಲ್ಲ. ಅದಕ್ಕೂ ಮಿಗಿಲಾಗಿ, ಸದ್ರಿ ಸುತ್ತೊಲೆಯಲ್ಲಿ ಅನೇಕ ಗೊಂದಲಗಳು ಇದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮಹಾಮಂಡಳದ ಆಡಳಿತ ಮಂಡಳಿಯು ಕರ್ನಾಟಕ ಹೈಕೋರ್ಟ್‌ನ ದಾವೆಯನ್ನು ಹೂಡಲಾಗಿತ್ತು.
ದಿನಾಂಕ 26-08-2021ರಂದು ಕರ್ನಾಟಕ ಹೈಕೋರ್ಟ್ ಮಹಾಮಂಡಳ ದ ಮನವಿಯನ್ನು ಪುರಸ್ಕರಿಸಿ ದಿನಾಂಕ 25-06-2021ರಂದು ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಸುತ್ತೋಲೆಗೆ ತಡೆಯಾಜ್ಞೆಯನ್ನು ನೀಡಿದೆ.
ಸದ್ಯಕ್ಕೆ ಹೊಸದಾಗಿ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ ಎಂದು ಮಹಾಮಂಡಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ತಿಳಿಸಿರುತ್ತಾರೆ.