ಕರ್ತವ್ಯದಲ್ಲಿದ್ದ ಗೃಹರಕ್ಷಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಕಂಬಿ ಹಿಂದೆ ಕಳುಹಿಸಿದ ಪೊಲೀಸರು
Monday, September 13, 2021
ಬೆಂಗಳೂರು: ಕರ್ತವ್ಯ ನಿರ್ವಹಣೆಯಲ್ಲಿದ್ದ ಗೃಹರಕ್ಷಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೋರ್ವನನ್ನು ಉಪ್ಪಾರ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.
ಚಾಲಕನಾಗಿ ವೃತ್ತಿ ನಿರ್ವಹಿಸುತ್ತಿದ್ದ ಹಾಸನ ಮೂಲದ ದೇವರಾಜ್(39) ಬಂಧಿತ ಆರೋಪಿ.
ನಗರದ ಉಪ್ಪಾರಪೇಟೆಯ ಬಿ.ಟಿ.ರಸ್ತೆಯಲ್ಲಿನ ಗಣೇಶ ದೇವಾಲಯದ ಬಳಿ ಗೃಹರಕ್ಷಕಿ(ಹೋಂಗಾರ್ಡ್)ಯನ್ನು ಕರ್ತವ್ಯಕ್ಕೆ ನೇಮಿಸಲಾಗಿತ್ತು. ಈ ಸಂದರ್ಭ ಅಲ್ಲಿಗೆ ಬಂದ ಚಾಲಕ ದೇವರಾಜ್ ಕುಡಿದ ಮತ್ತಿನಲ್ಲಿ ಗೃಹರಕ್ಷಕಿಗೆ ಅಶ್ಲೀಲವಾಗಿ ಕೈಸನ್ನೆ ಮಾಡಿದ್ದ. ಆತ ಬೇರೆ ಯಾರಿಗೋ ಕೈಸನ್ನೆ ಮಾಡಿರಬಹುದೆಂದು ಆಕೆ ಉಪೇಕ್ಷಿಸಿದ್ದಾರೆ. ಆದರೆ ಆರೋಪಿಯು ಗೃಹರಕ್ಷಕಿಯ ಬಳಿ ಬಂದು ಆಕೆಯ ಕೈಯನ್ನು ಬಲವಂತವಾಗಿ ಹಿಡಿದು, ಬಟ್ಟೆಯನ್ನು ಎಳೆದು ಸಾರ್ವಜನಿಕ ಪ್ರದೇಶದಲ್ಲಿ ಅವಹೇಳನಕಾರಿಯಾಗಿ ವರ್ತಿಸಿದ್ದಾನೆ.
ಆರೋಪಿ ದೇವರಾಜ್ನ ವರ್ತನೆಯನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಅವನಿಗೆ ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ್ದಾರೆ. ಈ ಬಗ್ಗೆ ಗೃಹರಕ್ಷಕಿ ಉಪ್ಪಾರ್‌ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೊಯ್ಸಳದಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ದೇವರಾಜ್‌ನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಆರೋಪಿ, ಈ ಹಿಂದೆಯೂ ದೇವಾಲಯಕ್ಕೆ ಬರುತ್ತಿದ್ದ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ.