ಮೋದಿ ಬರ್ತ್ ಡೇಯಂದೇ ಹುಟ್ಟಿದ ಮಗುವಿಗೆ 'ನರೇಂದ್ರ' ಎಂದು ನಾಮಕರಣ
Friday, September 17, 2021
ಬೀದರ್: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾದ ಇಂದು ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳಿಂದ ಸೇವೆ ಹಾಗೂ ಸಮರ್ಪಣಾ ಅಭಿಯಾನದ ಮೂಲಕ ವಿವಿಧ ಸೇವಾ ಕಾರ್ಯ ನಡೆಯುತ್ತಿದೆ. ಇಲ್ಲೊಂದು ದಂಪತಿ ಇಂದು ಹುಟ್ಟಿದ ತಮ್ಮ ಮಗುವಿಗೆ 'ನರೇಂದ್ರ' ಎಂದು ನಾಮಕರಣ ಮಾಡಿ ಗಮನ ಸೆಳೆದಿದ್ದಾರೆ.
ಚಿಟಗುಪ್ಪ ತಾಲೂಕಿನ ನಿರ್ಣಾವಾಡಿ ಗ್ರಾಮದ ಅಂಬಿಕಾ ಹಾಗೂ ವೀರಶೆಟ್ಟಿ ರಂಜೇರಿ ದಂಪತಿಯು ಇಂದು ಬೀದರ್ ತಾಲೂಕಿನ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿ ಜನಿಸಿದ ತಮ್ಮ ಪುತ್ರನಿಗೆ ‘ನರೇಂದ್ರ’ ಎಂದು ನಾಮಕರಣ ಮಾಡಿದವರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಂಪತಿ 'ಪ್ರಧಾನಿ ಮೋದಿಯವರ ಜನ್ಮದಿನದಂದೇ ನಮಗೆ ಮಗು ಜನಿಸಿರೋದು ಬಹಳ ಸಂತಸ ತಂದಿದೆ. ಹೀಗಾಗಿ ಈ ದಿನದ ಸವಿನೆನಪಿಗಾಗಿ ನಮ್ಮ ಮಗುವಿಗೆ ನರೇಂದ್ರ ಎಂದು ನಾಮಕರಣ ಮಾಡಿದ್ದೇವೆ ಎಂದಿದ್ದಾರೆ.
ದಂಪತಿ ತಮ್ಮ ಪುತ್ರನಿಗೆ 'ನರೇಂದ್ರ' ಎಂದು ದೇಶದ ಪ್ರಧಾನಿಯವರ ಹೆಸರಿಟ್ಟಿರುವುದು ಸಂತಸ ತಂದಿದೆ. ಇದು ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.