ಮತ್ತೊಬ್ಬನೊಂದಿಗೆ ಸೇರಿ ಪ್ರಿಯಕರನ ಹತ್ಯೆಗೆ ಸಂಚು ರೂಪಿಸಿದ ಪ್ರೇಯಸಿ: ಏನಿದು ಪ್ರಕರಣ?
Saturday, September 25, 2021
ನೆಲಮಂಗಲ: ತನ್ನೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಯಿಂದಲೇ 5 ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರಿಯಕರನನ್ನೇ ಪ್ರಿಯತಮೆಯೋರ್ವಳು ಸುಪಾರಿ ನೀಡಿ ಕೊಲೆ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸೇರಿ ನಾಲ್ವರು ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ನಗರದ ಮಾದಾವರ ನವಿಲೇ ಲೇಔಟ್ನ ನಿರ್ಜನ ಪ್ರದೇಶವೊಂದರಲ್ಲಿ ಸೆಪ್ಟೆಂಬರ್ 5ರಂದು ಕಿರಣ್ ಕುಮಾರ್ ಎಂಬಾತನನ್ನು ಕುತ್ತಿಗೆ ಹಾಗೂ ಎದೆಗೆ ಮಾರಕಾಸ್ತ್ರದಿಂದ ಚುಚ್ಚಿ ಕೊಲೆಗೆ ಯತ್ನಿಸಲಾಗಿತ್ತು. ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕೋಡಿ ಹಳ್ಳಿಯ ನಿವಾಸಿ ಕಿರಣ್ ಕುಮಾರ್(26) ಉದ್ಯೋಗ ನಿಮಿತ್ತ ಬೆಂಗಳೂರಿನ ಮಾದಾವರದಲ್ಲಿ ನೆಲೆಸಿದ್ದ. ಆಗ ಅದೇ ಗ್ರಾಮದ ಸಿದ್ದರಾಜು ಎಂಬಾತನ ಸ್ನೇಹ ಬೆಳೆದಿದ್ದು, ಆತನ ಮನೆಗೆ ಆಗಾಗ ಹೋಗಿ ಬರುತ್ತಿದ್ದ.
ಸಿದ್ದರಾಜುಗೆ ಶ್ವೇತಾಳೊಂದಿಗೆ ವಿವಾಹವಾಗಿದ್ದು, ಎರಡು ಮಕ್ಕಳಿದ್ದರು. ಈ ನಡುವೆ ಕಿರಣ್ ಕುಮಾರ್ ಹಾಗೂ ಶ್ವೇತಾಳ ನಡುವೆ ಅನೈತಿಕ ಸಂಬಂಧವೂ ಬೆಳೆದಿತ್ತು.
ಸಿದ್ದರಾಜು ಇತ್ತೀಚೆಗೆ ಮೃತಪಟ್ಟಿದ್ದ. ಆದ್ದರಿಂದ ಶ್ವೇತ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಕರೆತಂದು ಬೆಂಗಳೂರಿನ ಚೊಕ್ಕಸಂದ್ರದಲ್ಲಿ ಬಾಡಿಗೆ ಮನೆ ಮಾಡಿ ಇರಿಸಿದ್ದ.
ಈತನ ಅನೈತಿಕ ಸಂಬಂಧದ ಬಗ್ಗೆ ಕಿರಣ್ ಕುಮಾರ್ ಗೆ ಮನೆಯವರು ಬೇರೆ ಮದುವೆ ಮಾಡಿಸಿದ್ದರು. ಆದರೂ ಶ್ವೇತಾಳೊಂದಿಗಿನ ಅನೈತಿಕ ಸಂಬಂಧ ಮುಂದುವರಿಸಿದ್ದ.
ಆದರೆ ಕಿರಣ್ ಕುಮಾರ್ ಈ ಮಧ್ಯೆ ಶ್ವೇತಾ ಹಿರಿಯ ಪುತ್ರಿ ಮೇಲೆ ಕಣ್ಣು ಹಾಕಿದ್ದನಂತೆ.
ಮದುವೆಯ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡುತ್ತಿದ್ದನಂತೆ. ಇದು ಶ್ವೇತಾಳನ್ನು ಕೆರಳಿಸಿತ್ತು.
ಆರೋಪಿತೆ ಶ್ವೇತಾಗೆ ಈ ನಡುವೆ ಡೇವಿಡ್ ಎಂಬಾತನ ಪರಿಚಯವಾಗಿದ್ದು, ದಿನಗಳೆದಂತೆ ಇವರಿಬ್ಬರ ನಡುವೆ ಸಲುಗೆ ಬೆಳೆದಿದೆ. ಆದರೆ ಇವರಿಬ್ಬರು ಜೊತೆಯಾಗಿರಲು ಕಿರಣ್ ಕುಮಾರ್ ಮುಳುವಾಗಿದ್ದ. ಈ ಕಾರಣದಿಂದ ಸುಪಾರಿ ಕೊಟ್ಟು ಆತನ ಕೊಲೆ ಮಾಡಲು ಇಬ್ಬರೂ ಸೇರಿ ಸಂಚು ರೂಪಿಸಿದ್ದರು.
ಕಿರಣ್ ಕುಮಾರ್ ಕೊಲೆಗೆ ಸ್ಕೆಚ್ ಹಾಕಿದ್ದ ಡೇವಿಡ್ ತನ್ನ ಜೊತೆ ಶ್ರೀಕಾಂತ್ ಮತ್ತು ದಿನೇಶ್ ಎಂಬುವರನ್ನು ಸೇರಿಸಿಕೊಂಡಿದ್ದ. ಅಲ್ಲದೆ ಶ್ರೀಕಾಂತ್ ಮತ್ತು ದಿನೇಶ್ ಜೊತೆ ಒಟ್ಟು 1 ಲಕ್ಷ ರೂ.ಗೆ ಡೀಲ್ ಮಾತನಾಡಿಕೊಂಡಿದ್ದ ಡೇವಿಡ್, 10 ಸಾವಿರ ರೂ. ಹಣ ಮುಂಗಡವಾಗಿಯೂ ನೀಡಿದ್ದ.
ಕಿರಣ್ ಕುಮಾರ್ ಬಗ್ಗೆ ಎಲ್ಲಾ ವಿಚಾರಗಳನ್ನು ಅರಿತಿದ್ದ ಶ್ವೇತಾ ಆರೋಪಿಗಳಿಗೆ ಎಲ್ಲ ಮಾಹಿತಿ ನೀಡಿದ್ದಳು. ಆದ್ದರಿಂದ ಡೇವಿಡ್ ಸೂಚನೆಯಂತೆ ಶ್ರೀಕಾಂತ್ ಮತ್ತು ದಿನೇಶ್, ಕಿರಣ್ ಕುಮಾರ್ ಗೆ ಚೂರಿ ಯಿಂದ ಇರಿದಿದ್ದಾರೆ. ಆತ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ.
ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡವು ಸಿಸಿಟಿವಿಯಲ್ಲಿ ಬೈಕ್ ಚಲನವಲನ ಆಧರಿಸಿ ತನಿಖೆ ನಡೆಸಿತ್ತು.
ಬಳಿಕ ಕಿರಣದ ಕುಮಾರ್ ರೊಂದಿಗೆ ಆರೋಪಿತೆ ಶ್ವೇತಾಳ ವಿಚಾರಣೆಗೆ ನಡೆಸಿದ್ದರು. ಈ ಸಂದರ್ಭ ಕೃತ್ಯದ ಅಸಲಿಯತ್ತು ಹೊರ ಬಿದ್ದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಬೈಕ್, ಚಾಕು ವಶಪಡಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.