ಪತ್ನಿಯ ಮೇಲೆ ಅನುಮಾನ: ಕತ್ತು ಸೀಳಿ ಕೊಲೆಗೈದು ಪತಿ ಪರಾರಿ
Thursday, September 23, 2021
ಬೆಂಗಳೂರು: ಪತ್ನಿ ಬೇರೆಯವರೊಂದಿಗೆ ಸಂಬಂಧ ಇರಿಸಿಕೊಂಡಿದ್ದಾಳೆಂದು ಅನುಮಾನಗೊಂಡ ಪಾಪಿ ಪತಿಯೋರ್ವ ಆಕೆಯನ್ನು ಕತ್ತು ಸೀಳಿ ಕೊಲೆಗೈದ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.
ಅನ್ನಪೂರ್ಣೇಶ್ವರಿ ನಗರ ನಿವಾಸಿ ರೂಪಾ (34) ಕೊಲೆಯಾದ ದುರ್ದೈವಿ. ರಿಯಲ್ ಎಸ್ಟೇಟ್ ಉದ್ಯಮಿ ಕಾಂತರಾಜ್ (39) ಪತ್ನಿಯನ್ನು ಕೊಲೆ ಮಾಡಿದ ಆರೋಪಿ.
ಕಾಂತರಾಜ್ ಗೆ ಪತ್ನಿ ರೂಪಾ ಬೇರೆಯವರೊಂದಿಗೆ ಸಂಬಂಧ ಇರಿಸಿಕೊಂಡಿದ್ದಾಳೆಂಬ ಶಂಕೆಯಿದ್ದು, ಈ ವಿಚಾರದಲ್ಲಿ ಪ್ರತಿನಿತ್ಯ ಜಗಳ ಮಾಡುತ್ತಿದ್ದ. ಇದರಿಂದ ದಂಪತಿ ಮಧ್ಯೆ ಆಗಾಗ ಮನಸ್ತಾಪಗಳು ಉಂಟಾಗುತ್ತಿತ್ತು. ಬುಧವಾರ ಸಂಜೆ 4.30 ಸುಮಾರಿಗೆ ಕಾಂತರಾಜ್ ಪತ್ನಿಯ ಮೊಬೈಲ್ ಅನ್ನು ಪರಿಶೀಲಿಸಿದ್ದಾನೆ. ಆಗ ಪತ್ನಿ ಪರ ಪುರುಷನೊಂದಿಗೆ ಮಾತನಾಡಿದ್ದಾರೆಂದು ಕಾಂತರಾಜ್ ಗೆ ಅನುಮಾನ ಮೂಡಿದೆ.
ಈ ವಿಚಾರವೇ ದಂಪತಿ ನಡುವೆ ಕಲಹಕ್ಕೆ ಕಾರಣವಾಗಿದೆ. ಮಾತಿಗೆ ಮಾತು ಬೆಳೆದು ಆಕ್ರೋಶಿತನಾದ ಕಾಂತರಾಜ್ ಚೂರಿಯಿಂದ ಪತ್ನಿ ರೂಪಾ ಕತ್ತು ಸೀಳಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಟ್ಯೂಷನ್‌ಗೆ ಹೋಗಿದ್ದ ಮಗ ಮನೆಗೆ ಬಂದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಸ್ಥಳಕ್ಕೆ ಬಂದು ರೂಪಾರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಅದಾಗಲೇ ಆಕೆ ಮೃತಪಟ್ಟಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅನ್ನಪೂಣೇಶ್ವರಿ ನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತ್ನಿಯ ಹತ್ಯೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿ ಕಾಂತರಾಜ್‌ಗಾಗಿ ಶೋಧ ಮುಂದುವರೆದಿದೆ.