ಮಂಗಳೂರಿನಲ್ಲಿ ಶುರುವಾಯಿತು ನಿಫಾ ವೈರಸ್ ಭೀತಿ- ಶಂಕೆಯ ಹಿನ್ನೆಲೆಯಲ್ಲಿ ಓರ್ವನ ಮಾದರಿ ಪರೀಕ್ಷೆಗೆ ರವಾನೆ
Tuesday, September 14, 2021
ಮಂಗಳೂರು; ಕೇರಳದಲ್ಲಿ ಭಾರಿ ಆತಂಕ ಮೂಡಿಸಿರುವ ನಿಫಾ ವೈರಸ್ ಬಗ್ಗೆ ಮಂಗಳೂರಿನಲ್ಲಿ ಶಂಕಿತ ಒಂದು ಪ್ರಕರಣ ಆತಂಕಕ್ಕೆ ಕಾರಣವಾಗಿದೆ..
ಗೋವ ಮೂಲದ ವ್ಯಕ್ತಿಯೊಬ್ಬರು ನಿಫಾ ವೈರಸ್ ಶಂಕೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದು ರಿಪೋರ್ಟ್ ನಿರೀಕ್ಷಿಸಲಾಗುತ್ತಿದೆ. ಗೋವಾದಲ್ಲಿ ಆರ್ ಟಿ ಪಿ ಸಿ ಆರ್ ಟೆಸ್ಟ್ ಮಾಡುವ ಕಿಟ್ ತಯಾರಿಕಾ ಲ್ಯಾಬ್ ನಲ್ಲಿ ಕರ್ತವ್ಯ ನಿರ್ವಹಿಸುವ ವ್ಯಕ್ತಿಯೊಬ್ಬರು ಇತ್ತೀಚೆಗೆ ಕಾರವಾರಕ್ಕೆ ಬಂದಿದ್ದು ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ನಿಫಾ ವೈರಸ್ ಆತಂಕದಲ್ಲಿ ಮಣಿಪಾಲಕ್ಕೆ ತೆರಳಿ ಬಳಿಕ ಮಂಗಳೂರು ಆಸ್ಪತ್ರೆಗೆ ಬಂದಿದ್ದಾರೆ. ಅವರು ಸ್ವ ಇಚ್ಛೆಯಿಂದ ತಮ್ಮಲ್ಲಿ ನಿಫಾ ವೈರಸ್ ಇರುವ ಬಗ್ಗೆ ಪರೀಕ್ಷೆ ನಡೆಸುವಂತೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮಾದರಿಯನ್ನು ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಈ ವ್ಯಕ್ತಿಗೆ ಯಾವುದೇ ರೋಗಲಕ್ಷಣಗಳು ಇಲ್ಲದೆ ಇದ್ದು ಅವರು ಶಂಕೆ ವ್ಯಕ್ತಪಡಿಸಿದ್ದರಿಂದ ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.