ವಿಚ್ಛೇದಕ್ಕೆ ಕೋರ್ಟ್ ಮೆಟ್ಟಿಲು ಹತ್ತಿದ ಪತ್ನಿಯ ಮೂಗನ್ನೇ ಕಚ್ಚಿ ಗಾಯಗೊಳಿಸಿದ ಪತಿರಾಯ!
Monday, September 27, 2021
ಮಧ್ಯಪ್ರದೇಶ: ಪತಿಯ ಕಿರುಕುಳದಿಂದ ಬೇಸತ್ತು ಮಕ್ಕಳೊಂದಿಗೆ ತವರು ಸೇರಿರುವ ಪತ್ನಿಯನ್ನು ಬಿಡದೆ ಕಾಡುತ್ತಿದ್ದ ಪತಿರಾಯನೋರ್ವನು ಆಕೆಯ ಮೂಗನ್ನೇ ಕಚ್ಚಿ ತುಂಡರಿಸಿರುವ ಭಯಾನಕ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದೆ.
ತನ್ನಿಬ್ಬರು ಹೆಣ್ಣು ಮಕ್ಕಳ ಎದುರಲ್ಲೇ ಪತ್ನಿಯ ಮೂಗನ್ನು ಪತಿ ಕಚ್ಚಿ ಕ್ರೌರ್ಯ ಮೆರೆದಿದ್ದಾನೆ. ಮೂಗು ಗಾಯಗೊಂಡು ವೇದನೆ ಪಡುತ್ತಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.
ಟೀನಾ ಎಂಬ ಯುವತಿಗೆ ಜುಜ್ಜೈನಿಯ ದಿನೇಶ್ ಎಂಬಾತನೊಂದಿಗೆ ವಿವಾಹವಾಗಿತ್ತು. ಅವರಿಗೆ ಇಬ್ಬರು ಮಕ್ಕಳೂ ಇದ್ದರು. ಆದರೆ ಪತಿಯ ಕಿರುಕುಳವನ್ನು ಸಹಿಸಲಾಗದೆ ಪತ್ನಿ ಟೀನಾ ಆಲೌಟ್ ಆಂಜುಮನ್ ಕಾಲೋನಿಯಯಲ್ಲಿರುವ ತನ್ನ ತವರು ಮನೆಗೆ ಬಂದಿದ್ದರು. ಇವರ ವಿಚ್ಛೇದನಾ ಪ್ರಕರಣ ನ್ಯಾಯಾಲಯದಲ್ಲಿದ್ದು, ಅದನ್ನು ವಾಪಸ್ ಪಡೆಯುವಂತೆ ಪತ್ನಿಗೆ ದಿನೇಶ್ ಬಲವಂತ ಮಾಡಿದ್ದಾನೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ದಿನೇಶ್ ಪತ್ನಿಯ ಮೂಗನ್ನು ಕಚ್ಚಿ ಪರಾರಿಯಾಗಿದ್ದಾನೆ.
ಈ ಸಂದರ್ಭ ಮಹಿಳೆ ಮತ್ತು ಆಕೆಯ ಮಕ್ಕಳ ಚೀರಾಟ ಕೇಳಿ ಸ್ಥಳೀಯರು ಅಲ್ಲಿಗೆ ಬಂದಾಗ ಆಕೆಯು ಮೂಗು ಗಾಯಗೊಂಡು ವೇದನೆಯಿಂದ ಒದ್ದಾಡುತ್ತಿದ್ದರು. ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿರುವ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
2008 ರಲ್ಲಿ ಟೀನಾ ಹಾಗೂ ದಿನೇಶ್ ಮದುವೆಯಾಗಿತ್ತು. ದಿನೇಶ್ ಯಾವುದೇ ಕೆಲಸ ಮಾಡದೆ ಮದ್ಯಪಾನ ಮಾಡಿ ನಿತ್ಯವೂ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ದಿನೇಶ್ ನಿಂದ ದೂರವಾಗಿ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ತವರುಮನೆಯಲ್ಲಿ ವಾಸಿಸುತ್ತಿದ್ದಳು. 2019 ರಲ್ಲಿ ಪತಿಯಿಂದ ಡೈವೋರ್ಸ್ ಹಾಗೂ ಪರಿಹಾರಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಈ ಕೇಸ್ ಹಿಂಪಡೆಯುವಂತೆ ದಿನೇಶ್ ಒತ್ತಡ ಹಾಕುತ್ತಿದ್ದ. ಇದಕ್ಕೆ ಪತ್ನಿ ಒಪ್ಪದಿರುವುದನ್ನು ಕಂಡು ಆಕೆಯ ತವರು ಮನೆಗೆ ಬಂದು ಮೂಗು ಕಚ್ಚಿದ್ದಾನೆ ಎನ್ನಲಾಗಿದೆ.