ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ: ನಾಲ್ವರ ಬದುಕು ಬೆಳಗಿದ ಮಹಾತಾಯಿ
Wednesday, September 15, 2021
ಹಾವೇರಿ: ಸಾವಿನ ಹಂತದಲ್ಲೂ 20 ವರ್ಷದ ಯುವತಿಯೋರ್ವರು ನಾಲ್ವರ ಬದುಕನ್ನು ಬೆಳಗಿಸಿ ಸಾರ್ಥಕತೆ ಮೆರೆದಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಳ್ಳೂರು ಗ್ರಾಮದ ಕವನ ಮಳ್ಳಯ್ಯ ಹಿರೇಮಠ ಶಿಕಾರಿಪುರದ ಗಾಮೆಂಟ್ಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹೊನ್ನಾಳಿಯ ಸೊರಟೂರು ಗ್ರಾಮದ ಬಳಿ ಸೆ.9ರಂದು ನಡೆದ ಭೀಕ ರಸ್ತೆ ಅಪಘಾತವೊಂದರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಕವನ ಗಂಭೀರವಾಗಿ ಗಾಯಗೊಂಡಿದ್ದರು.
ಗಂಭೀರವಾಗಿದ್ದ ಗಾಯಗೊಂಡಿದ್ದ ಕವನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ತೀವ್ರವಾದ ಗಾಯಗೊಂಡಿದ್ದರಿಂದ ಅವರು ಕೋಮಾಗೆ ತಲುಪಿದ್ದರು. ಅಲ್ಲದೆ ಅವರ ಮಿದುಳು ನಿಷ್ಕ್ರಿಯಗೊಂಡಿತ್ತು.
ಮಗಳಂತೂ ಬದುಕುದಿಲ್ಲ, ಅವಳ ಅಂಗಾಂಗವಾದರೂ ಇತರರ ಬಾಳು ಬೆಳಗಲಿ ಎಂದು ಕವನ ಹೆತ್ತವರು ನಿರ್ಧರಿಸಿದ್ದಾರೆ. ಈ ಬಗ್ಗೆ ಕುಟುಂಬಸ್ಥರು ವೈದ್ಯರೊಂದಿಗೆ ಚರ್ಚಿಸಿ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಕವನ ಕಿಡ್ನಿ, ಹೃದಯ, ಲಿವರ್, ಕಣ್ಣು, ಚರ್ಮ ದಾನ ಮಾಡಿದ್ದಾರೆ. ತಕ್ಷಣವೇ ಅಂಗಾಂಗಗಳನ್ನು ಬೇರೆ ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದ್ದು, ಇದರಿಂದ ನಾಲ್ವರ ಪ್ರಾಣ ಉಳಿದಿದೆ. ಕವನ ಮೃತದೇಹಕ್ಕೆ ಎ.ಜೆ.ಆಸ್ಪತ್ರೆ ವೈದ್ಯರು ಅಂತಿಮ ವಿದಾಯ ಹೇಳಿದ ದೃಶ್ಯ ಮಾತ್ರ ಮನಕಲಕುವಂತಿತ್ತು.