ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್ ಇನ್ನಿಲ್ಲ
Monday, September 13, 2021
ಮಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್ ಚಿಕಿತ್ಸೆ ಫಲಕಾರಿಯಾಗದೆ ಇದೀಗ ತಾನೆ ಮೃತಪಟ್ಟಿದ್ದಾರೆ.
ಜುಲೈ 19ರಂದು ಆಸ್ಕರ್ ಫರ್ನಾಂಡೀಸ್ ಅವರಿಗೆ ಮನೆಯಲ್ಲಿ ಯೋಗ ಅಭ್ಯಾಸ ಮಾಡುವ ಮಾಡುವ ಸಂದರ್ಭ ಜಾರಿ ಬಿದ್ದು ಗಾಯವಾಗಿತ್ತು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ವಾರಕ್ಕೆ ಮೂರುದಿನ ಡಯಾಲಿಸಿಸ್ ಗೆಂದು ನಗರದ ಯೆನೆಪೊಯ ಆಸ್ಪತ್ರೆಗೆ ಬರುತ್ತಿದ್ದ ಅವರು ಈ ಬಗ್ಗೆ ವೈದ್ಯಕೀಯ ತಪಾಸಣೆ ನಡೆಸಿದಾಗ ತಲೆಯ ಒಳಗೆ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಗಿದೆ.
ಆದ್ದರಿಂದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆ ಬಳಿಕ ಅವರು ಕೋಮಾಕ್ಕೆ ತೆರಳಿದ್ದರು. ಈ ನಡುವೆ ಮಾಜಿ ಸಿಎಂಗಳಾದ ವೀರಪ್ಪ ಮೊಯಿಲಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್, ಪುದುಚೇರಿಯ ಮಾಜಿ ಸಿಎಂ ನಾರಾಯಣ ಸ್ವಾಮಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸೇರಿದಂತೆ ಅನೇಕ ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು.
ತೀವ್ರ ನಿಗಾ ಘಟಕದಲ್ಲಿಯೇ ಒಂದುವರೆ ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎನ್ನಲಾಗಿತ್ತು. ಆದರೆ ಇಂದು ಮಧ್ಯಾಹ್ನ ಹೊತ್ತಿಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.