ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಬೆದರಿಕೆ: ಯುವಕನ ಮೇಲೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು
Saturday, September 25, 2021
ಕಾರ್ಕಳ: ಅಪ್ರಾಪ್ತ ಬಾಲಕಿಯೊಂದಿಗೆ ಸಲಿಗೆ ಬೆಳೆಸಿರುವ ಯುವಕನೋರ್ವನು ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಹಲ್ಲೆಗೈದು ಬೆದರಿಕೆ ಹಾಕಿರುವ ಘಟನೆ ಕಾರ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಸೆ.23ರಂದು ಸಂತ್ರಸ್ತ ಅಪ್ರಾಪ್ತ ಬಾಲಕಿ ಕಾರ್ಕಳದ ಬಂಗ್ಲೆಗುಡ್ಡೆಯ ನಿಯಾಜ್ ಎಂಬಾತನ ವಿರುದ್ಧ ದೂರು ದಾಖಲಿಸಿದ್ದಾಳೆ. ಆರೋಪಿ ನಿಯಾಜ್ ಬಾಲಕಿಯ ಮೊಬೈಲ್ ನಂಬರ್ ಪಡೆದು ಕರೆ ಮಾಡುತ್ತಿದ್ದ. ಬಳಿಕ ಆಕೆಯೊಂದಿಗೆ ಸಲಿಗೆ ಬೆಳೆಸಿಕೊಂಡಿದ್ದ ಎಂದು ದೂರಲಾಗಿದೆ.
ಆರೋಪಿ ಕಳೆದ ವರ್ಷ ಮೇ 30ರಂದು ಬಂಗ್ಲೆಗುಡ್ಡೆಯಲ್ಲಿರುವ ತನ್ನ ಮನೆಗೆ ಯಾರೂ ಇಲ್ಲದ ಸಂದರ್ಭ ಸಂತ್ರಸ್ತ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದ. ಆ ಬಳಿಕಯ ಅದೇ ರೀತಿ ಹಲವೆಡೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ. ಸೆ.23ರಂದು ಮತ್ತೆ ತನ್ನೊಂದಿಗೆ ಬರಬೇಕೆಂದು ಬಲವಂತ ಪಡಿಸಿದ್ದಾನೆ. ಬಳಿಕ ಕಾರ್ಕಳ ಬಸ್ ಸ್ಟಾಂಡ್‌ನಿಂದ ದ್ವಿಚಕ್ರ ವಾಹನದಲ್ಲಿ ಪತ್ತೊಂಜಿಕಟ್ಟೆ ಎಂಬಲ್ಲಿನ ಮರದ ಮಿಲ್ ಬಳಿ ಕರೆದೊಯ್ದು ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಆರೋಪಿ ನಿಯಾಝ್ ತನ್ನ ಬ್ಯಾಗಿನಲ್ಲಿದ್ದ ಮೊಬೈಲ್ ಫೋನನ್ನು ಕಸಿದುಕೊಂಡು ಹೋಗಿದ್ದಾನೆಂದು ದೂರಿನಲ್ಲಿ ಬಾಲಕಿ ತಿಳಿಸಿದ್ದಾಳೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.