ಕಾಸರಗೋಡು ಮೂಲದ ನಗ್ಮಾ ಮುಹಮ್ಮದ್ ಮಲಿಕ್ ಪೋಲೆಂಡ್ ಭಾರತೀಯ ರಾಯಭಾರಿಯಾಗಿ ನೇಮಕ
Saturday, September 18, 2021
ಮಂಗಳೂರು: ದ.ಕ.ಜಿಲ್ಲೆಯ ಗಡಿ ಪ್ರದೇಶವಾದ ಕಾಸರಗೋಡು ಮೂಲದ ನಗ್ಮಾ ಮುಹಮ್ಮದ್ ಮಲಿಕ್ ಎಂಬವರು ಪೋಲೆಂಡ್ ದೇಶದ ಭಾರತೀಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ನಗ್ಮಾ ಮುಹಮ್ಮದ್ ಮಲಿಕ್ ಕಾಸರಗೋಡಿನ ಫೋರ್ಟ್ ರೋಡ್ ನಿವಾಸಿಯಾಗಿದ್ದ ದಿ.ಮುಹಮ್ಮದ್ ಹಬೀಬುಲ್ಲಾ ಮತ್ತು ಝುಲು ಬಾನು ದಂಪತಿಯ ಪುತ್ರಿ.
ದಿ.ಮುಹಮ್ಮದ್ ಹಬೀಬುಲ್ಲಾ ಅವರಿಗೆ ಕೇಂದ್ರ ಸರಕಾರದ ಸಾಗರೋತ್ತರ ಸಂವಹನ ಇಲಾಖೆಯಲ್ಲಿ ಕೆಲಸವಾದ ಬಳಿಕ ಅವರು ಕುಟುಂಬ ಸಹಿತ ನವದೆಹಲಿಯಲ್ಲಿಯೇ ವಾಸವಾಗಿದ್ದರು. ಆದ್ದರಿಂದ ನಗ್ಮಾ ನವದೆಹಲಿಯಲ್ಲಿ ಹುಟ್ಟಿ ಬೆಳೆದಿದ್ದರು. ಸೈಂಟ್ ಸ್ಟೀಫನ್ಸ್ ಕಾಲೇಜು ಮತ್ತು ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಶಿಕ್ಷಣ ಪಡೆದ ಅವರು, ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
1991ರಿಂದ ವಿದೇಶಾಂಗ ಇಲಾಖೆಯಲ್ಲಿ ವೃತ್ತಿ ರಾಜತಾಂತ್ರಿಕರಾಗಿ ವೃತ್ತಿಜೀವನವನ್ನು ಆರಂಭಿಸಿದ ನಗ್ಮಾ, ಮೊದಲು ಪ್ಯಾರೀಸ್‌ನ ಯುನೆಸ್ಕೋ ಭಾರತೀಯ ಮಿಷನ್‌ಗೆ ನೇಮಕಗೊಂಡಿದ್ದರು. ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿನ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೆ ತುನಿಷಿಯಾ ಮತ್ತು ಬ್ರೂನಿ ದೇಶಗಳ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಖಟ್ಮಂಡು, ಕೊಲಂಬೋ, ಬ್ಯಾಂಕಾಕ್ ಗಳ ಭಾರತೀಯ ರಾಯಭಾರ ಕಚೇರಿಗಳಲ್ಲೂ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಲ್ಲದೆ ಮಾಜಿ ಪ್ರಧಾನಮಂತ್ರಿಗಳಾದ ಐ.ಕೆ.ಗುಜ್ರಾಲ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಸಿಬ್ಬಂದಿ ಅಧಿಕಾರಿಯಾಗಿದ್ದರು. ವಿದೇಶಾಂಗ ಇಲಾಖೆಯ ಶಿಷ್ಟಾಚಾರ ವಿಭಾಗದ ಉಪ ಮುಖ್ಯಸ್ಥೆಯಾದ ದೇಶದ ಪ್ರಥಮ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ. ಇವರು ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ಸಹೋದರನ ಪುತ್ರಿಯಾಗಿದ್ದಾರೆ.