ಯುವತಿಯರ ಖಾಸಗಿ ದೃಶ್ಯ ಸೆರೆ ಹಿಡಿದು ಇನ್ನಿಲ್ಲದಂತೆ ಕಾಡುವ ಕಾಮುಕ ಪೊಲೀಸ್ ಬಲೆಗೆ
Tuesday, September 14, 2021
ಬೆಂಗಳೂರು: ಪ್ರೀತಿ-ಪ್ರೇಮವೆಂದು ನಾಟಕವಾಡಿ ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಖತರ್ನಾಕ್ ಯುವಕನೋರ್ವ, ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಶ್ಲೀಲ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ. ಬಳಿಕ ಆ ವೀಡಿಯೋವನ್ನು ಇರಿಸಿಕೊಂಡು ಆ ಯುವತಿಯರನ್ನು ಇನ್ನಿಲ್ಲದಂತೆ ಕಾಡುತ್ತಿದ್ದ. ಇದೀಗ ಈತನಿಂದ ಮೋಸ ಹೋದ ಯುವತಿ ನೀಡಿರುವ ದೂರಿನ ಮೇರೆಗೆ ಬ್ಯಾಡರಹಳ್ಳಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬ್ಯಾಡರಹಳ್ಳಿಯ ನಿವಾಸಿ ರಾಕೇಶ್ (26) ಬಂಧಿತ ಆರೋಪಿ.
ಈತ ಪೊಲೀಸ್ ಬಲೆಗೆ ಬಿದ್ದ ಬಳಿಕ ಈತನ ಮೊಬೈಲ್ ಫೋನ್ ಪರಿಶೀಲನೆ ನಡೆಸಿದಾಗ ಮತ್ತೊಂದು ಶಾಕ್ ಕಾದಿತ್ತು. ಈತ ಬರೋಬ್ಬರಿ 6 ಯುವತಿಯರ ಖಾಸಗಿ ದೃಶ್ಯ ಸೆರೆ ಹಿಡಿದು ಅವರನ್ನು ಕಾಡುತ್ತಿದ್ದ ಎಂಬುದು ಬಯಲಾಗಿದೆ.
ದೂರು ನೀಡಿರುವ 24 ವರ್ಷದ ಸಂತ್ರಸ್ತೆ ಫ್ಯಾನ್ಸಿ ಸ್ಟೋರ್ ಒಂದನ್ನು ನಡೆಸುತ್ತಿದ್ದಳು. ಕೆಲ ಸಮಯಗಳ ಹಿಂದೆ ಈಕೆಗೆ ಆರೋಪಿ ರಾಕೇಶ್‌ನ ಪರಿಚಯವಾಗಿತ್ತು. ಪರಿಚಯದಿಂದ ಮತ್ತಷ್ಟು ಸಲಿಗೆ ಬೆಳೆಸಿಕೊಂಡ ಆರೋಪಿ ರಾಕೇಶ್ ಪ್ರೀತಿಸುವುದಾಗಿ ಹೇಳಿ ಪ್ರೇಮ ನಿವೇದನೆ ಮಾಡಿದ್ದ. ಆತನ ಪ್ರೀತಿ ನಿಜವೆಂದು ನಂಬಿದ್ದ ಯುವತಿ ಆತನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿದ್ದಳು.
ನಂತರ ಇಬ್ಬರಲ್ಲೂ ವಾಟ್ಸ್‌ಆ್ಯಪ್‌ನಲ್ಲಿ ಚಾಟಿಂಗ್ ಮೂಲಕ ಮತ್ತಷ್ಟು ಸಲುಗೆ ಬೆಳೆದಿದೆ. ಈ ಸಲುಗೆಯನ್ನು ದುರುಪಯೋಗ ಪಡಿಸಿಕೊಂಡ ರಾಕೇಶ್ ಕೆಲ ದಿನಗಳ ಹಿಂದೆ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆಕೆಯ ಗಮನಕ್ಕೆ ಬಾರದಂತೆ ತನ್ನ ಮೊಬೈಲ್‌ನಲ್ಲಿ ಆಕೆಯ ಅಶ್ಲೀಲ ದೃಶ್ಯಗಳನ್ನು ಸೆರೆ ಹಿಡಿದಿದ್ದ. ಬಳಿಕ ಯುವತಿಯ ವಾಟ್ಸ್ಆ್ಯಪ್‌ಗೆ ಅದರ ವೀಡಿಯೋವನ್ನು ಕಳುಹಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ. ಹಣ ಕೊಡದಿದ್ದಲ್ಲಿ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸುತ್ತಿದ್ದ.
ಇದರಿಂದ ಹೆದರಿದ ಯುವತಿ ಆರೋಪಿ ರಾಕೇಶನಿಗೆ ಹಂತ ಹಂತವಾಗಿ ಒಟ್ಟು 2 ಲಕ್ಷಕ್ಕೂ ಅಧಿಕ ಹಣ ಕೊಟ್ಟಿದ್ದಳು. ಆದರೂ ಆರೋಪಿ ಮತ್ತೆ ಮತ್ತೆ ಹಣಕ್ಕೆ ಬೇಡಿಕೆಯಿಟ್ಟು ಕಾಡಲಾರಂಭಿಸಿದ್ದಾನೆ.
ಈತನ ತೊಂದರೆಯನ್ನು ಸಹಿಸದ ಸಂತ್ರಸ್ತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿ ರಾಕೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈತ ಇನ್ನಷ್ಟು ಯುವತಿಯರಿಗೆ ಇದೇ ರೀತಿ ವಂಚನೆ ಮಾಡಿರುವುದಾಗಿ ತಿಳಿದು ಬಂದಿದೆ. ಆರೋಪಿಯು ಮೊದಲಿಗೆ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಾನೆ. ಬಳಿಕ ಅವರೊಂದಿಗೆ ಸಲಿಗೆ ಬೆಳೆಸಿಕೊಂಡು ಪ್ರೀತಿಯ ನಾಟಕವಾಡುತ್ತಿದ್ದ. ಆತನ ಮಾತಿಗೆ ಮರುಳಾಗಿ ಯುವತಿಯರು ಪ್ರೀತಿಗೆ ಸಮ್ಮತಿಸಿದರೆ, ಬಳಿಕ ಅವರೊಂದಿಗೆ ತಾನು ಸಲುಗೆಯಿಂದಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ.
ಆತನ ಮೊಬೈಲ್ ಪರಿಶೀಲನೆ ಮಾಡಿದ ಸಂದರ್ಭ 5-6 ಯುವತಿಯರಿಗೆ ವಂಚಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ, ಮೋಸಕ್ಕೆ ಒಳಗಾಗಿರುವ ಇತರ ಯುವತಿಯರು ಪೊಲೀಸ್ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.